ಮಣಿಪಾಲ : ಕಾಸರಗೋಡು ಚಿನ್ನಾ ಅವರ ಪರಿಕಲ್ಪನೆಯ ‘ಘರ್ ಘರ್ ಕೊಂಕಣಿ’ ಎನ್ನುವ ಕಾರ್ಯಕ್ರಮದ ನೂರ ಐವತೊಂದನೇ ಕಾರ್ಯಕ್ರಮವು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಸಾಯಿರಾಧಾ ಗ್ರೀನ್ ವೇಲಿಯ ಖ್ಯಾತ ಸಾಹಿತಿ, ಶ್ರೀಯುತ ಕಾಡಬೆಟ್ಟು ಮನೋಹರ ನಾಯಕ್ ಮತ್ತು ಶ್ರೀಮತಿ ಶೀಲಾ ನಾಯಕ್ ಇವರ ಆತಿಥ್ಯದಲ್ಲಿ ದಿನಾಂಕ 13-04-2024ರಂದು ಬೆಳಗ್ಗೆ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ‘ಘರ್ ಘರ್ ಕೊಂಕಣಿ’ ಇದರ ರೂವಾರಿ ಕಾಸರಗೋಡು ಚಿನ್ನಾ ಮಾತನಾಡಿ “ಮಾತೃ ಭಾಷೆಯೇ ಅತ್ಯಂತ ಶ್ರೇಷ್ಟವಾದ ಭಾಷೆ. ಅದನ್ನು ಕಲಿಸಿದ ತಾಯಿಯೇ ಈ ಜಗತ್ತಿನ ಅತ್ಯಂತ ಶ್ರೇಷ್ಟ ದೇವರು. ಆ ಋಣವನ್ನು ತೀರಿಸಲಸಾಧ್ಯ. ಕೊನೆ ಪಕ್ಷ ಮನೆಯಲ್ಲಿ ಭಾಷೆಗಾಗಿ ದೀಪ ಹಚ್ಚುವ ಕೆಲಸ ಮಾಡಬೇಕಾಗಿದೆ” ಎಂದು ತಿಳಿಸಿದರು.
ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ, ಭಾಷಾ ಪ್ರೀತಿಯನ್ನು ಬೆಳೆಸುವುದಕ್ಕಾಗಿ ಹಾಗೂ ವಿವಿಧ ಪಂಗಡಗಳಲ್ಲಿ ಕೊಂಕಣಿ ಭಾಷಿಗರನ್ನು ಒಂದುಗೂಡಿಸುವುದಕ್ಕಾಗಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ತಮ್ಮ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ ಅದ್ಭುತ ಪರಿಕಲ್ಪನೆಯ ಈ ‘ಘರ್ ಘರ್ ಕೊಂಕಣಿ’ ಎನ್ನುವ ವಿನೂತನ ಹಾಗೂ ಅದ್ಭುತ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ಮಣಿಪಾಲದ ಹೊಟೇಲ್ ಮಧುವನ್ ಸೆರಾಯ್ ಇದರ ಮಧುರಾ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.
ಶ್ರೀಯುತ ಚೇಂಪಿ ರಾಮಚಂದ್ರ ಭಟ್ ಇವರ ಸಾರಥ್ಯದಲ್ಲಿ ಅತ್ಯಂತ ಸಮರ್ಪಕವಾಗಿ ನಡೆದಂತಹ ಕಾರ್ಯಕ್ರಮ ಪ್ರಾರಂಭದಲ್ಲಿ ಕಾಸರಗೋಡು ಚಿನ್ನಾ, ಚೇಂಪಿ ರಾಮಚಂದ್ರ ಭಟ್ ಹಾಗೂ ಮನೋಹರ್ ನಾಯಕ್ ಮತ್ತು ಶೀಲಾ ನಾಯಕ್ ದಂಪತಿಗಳು ಸೇರಿ ಉದ್ಘಾಟಿಸಿದಂತಹ ಈ ಕಾರ್ಯಕ್ರಮ ಮುಂದುವರಿದು ಮನೋಹರ್ ನಾಯಕ್ ಅವರೇ ರಚಿಸಿದ ನಮ್ಮ ಕೊಂಕಣಿ ಸಂಸ್ಕೃತಿಯ ವಿವಾಹದ ಹಾಗೂ ಜೋಗುಳದ ಹಾಡುಗಳ ವಿಡಿಯೋ ಚಿತ್ರೀಕರಣದೊಂದಿಗೆ ಪ್ರಾರಂಭಗೊಂಡು, ಮುಂದುವರೆಯುತ್ತಾ ಅನೇಕ ಕೊಂಕಣಿ ಭಾಷಿಗ ಪಂಗಡಗಳ ವೈವಿಧ್ಯಮಯ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜನಮನ ಸೂರೆಗೊಂಡವು.
ಖ್ಯಾತ ಸಂಗೀತಗರ ತೋನ್ಸೆ ರಂಗ ಪೈ, ರಂಗ ಕಲಾವಿದ ಶಶಿಭೂಷಣ ಕಿಣಿ, ನಿರ್ಮಾಪಕ ಟಿ.ಎ. ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು. ನಂತರ ನಡೆದ ಸುಂದರ ಸಭಾ ಕಾರ್ಯಕ್ರಮ ಶ್ರೀಯುತ ಚೇಂಪಿ ರಾಮಚಂದ್ರ ಭಟ್ ಅವರ ಉಸ್ತುವಾರಿಯ ನಿರೂಪಣೆಯೊಂದಿಗೆ, ಅತಿಥೇಯ ಮನೋಹರ್ ನಾಯಕ್ ರವರ ಅತ್ಯಂತ ವಿಶಿಷ್ಟವಾದ ಸಾಹಿತ್ಯಿಕವಾದ ಶಬ್ದ ಭಂಡಾರದ ಆತ್ಮೀಯ ಸ್ವಾಗತ ಭಾಷಣದೊಂದಿಗೆ ಪ್ರಾರಂಭಗೊಂಡಿತು.
ಟಿ. ಅಶೋಕ್ ಪೈಯವರು ಉದ್ಘಾಟಕರಾಗಿ ತಮ್ಮ ಹಾಗೂ ಮನೋಹರ್ ನಾಯಕ್ ಹಾಗೂ ಅವರ ತೀರ್ಥರೂಪರ ಅನುಬಂಧದ ಬಗ್ಗೆ ಅತ್ಯಂತ ಸರಳ ಹಾಗೂ ಹೃದಯ ಸ್ಪರ್ಶಿ ಅನುಭವಗಳ ವಿಚಾರಗಳನ್ನು ಮಾತನಾಡುತ್ತಾ ಒಂದು ಆತ್ಮೀಯ ವಾತಾವರಣವನ್ನು ನಿರ್ಮಿಸುತ್ತ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಪರಿಸರದ ಹನ್ನೆರಡು ಮಂದಿಯನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಇಬ್ಬರು ಯುವ ಪ್ರತಿಭಾನ್ವಿತರಿಗೆ ಯುವ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮನೋಹರ್ ನಾಯಕ್ ಅವರ ‘ತವರುಮನೆ’ ಹೆಸರಿನ ಮನೆಯ ಆತಿಥ್ಯದಲ್ಲಿ ನಡೆದಂತಹ ಈ ‘ಘರ್ ಘರ್ ಕೊಂಕಣಿ’ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಸನ್ಮಾನಿತರಿಗೆ ಕೊಟ್ಟಂತಹ ‘ದೇವು ಬರೇ ಕೋರೋ’ ಹಾಗೂ ‘ತವರು ಮನೆ’ ಎಂದು ಬರೆದಂತಹ ಚೀಲದಲ್ಲಿ ಇರುವ ವಸ್ತುಗಳು ಅಕ್ಷರಶಃ ತವರು ಮನೆಯಿಂದ ಮಗಳಿಗೆ ಕೊಡುವಂತಹ ವಸ್ತುಗಳೇ ಆಗಿದ್ದದ್ದು ಅತ್ಯಂತ ವಿಶಿಷ್ಟ ಹಾಗೂ ಆತ್ಮೀಯ ವಿಚಾರ. ಅದರಲ್ಲಿ ಇದ್ದದ್ದು ಗೋಧಿ ಸೇವಿಗೆ, ಒಗ್ಗರಣೆ ಉಸ್ಲಿ ಮಾಡುವ ರಾಗಿ ಸಂಡಿಗೆ, ಮಜ್ಜಿಗೆಮೆಣಸು, ಓಲೆ ಬೆಲ್ಲ, ಮಾವಿನ ಹಣ್ಣಿನ ಮಾಂಬಳ, ಅಪ್ಪೆಮಿಡಿ ಉಪ್ಪಿನಕಾಯಿ, ಬೆಳ್ಳುಳ್ಳಿ ಚಟ್ನಿ ಪುಡಿ, ಹಲಸಿನ ಚಿಪ್ಸ್, ಉಡುಪಿಯ ಅಷ್ಟಮಿ ಲಾಡು, ಒಂದು ದೀಪ ಹಾಗೂ ಅದನ್ನು ಉರಿಸಲು ಬತ್ತಿ ಕಟ್ಟು.
ಅಬ್ಬಾ!! ಎಂತಹ ವಿಶೇಷ ಪರಿಕಲ್ಪನೆ!! ಮನಸ್ಸನ್ನು ಮುಟ್ಟಿ ಹೃದಯವನ್ನು ತಟ್ಟಿ ಕಣ್ಣುಗಳನ್ನ ಆದ್ರಗೊಳಿಸುವ ಆತ್ಮೀಯ ವಸ್ತುಗಳು ಇದನ್ನು ಪಡೆದವರಿಗೆ ತವರು ಮನೆಯ ಅನುಭವ ಆಗದೇ ಇರಲು ಸಾಧ್ಯವಿದೆಯೇ?! ಇದನ್ನು ಪಡೆದ ನಾವೇ ಧನ್ಯರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವಿಧ ಪಂಗಡಗಳ ಮುಂದಾಳುಗಳ ಮತ್ತು ಎಲ್ಲಾ ಅಥಿತಿಗಳ ಚಿಕ್ಕ ಹಾಗೂ ಚೊಕ್ಕವಾದ ಸಾಂದರ್ಭಿಕ ಮಾತುಗಳು ಸಭೆಯ ಮೆರುಗನ್ನು ಹೆಚ್ಚಿಸಿದವು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಹಾಗೂ ಕೊಂಕಣಿ ಭಾಷೋದ್ಧಾರಕ್ಕಾಗಿ ಸದಾ ಕ್ರಿಯಾಶೀಲರಾಗಿರುವ, ವಿಶ್ವ ಕೊಂಕಣಿ ಕೇಂದ್ರದ ಅಭಿವೃದ್ಧಿಗಾಗಿ ಅನೇಕ ಹೊಸ ಯೋಜನೆ ಯೋಚನೆ ಹೊಂದಿ ಅಹರ್ನಿಶಿ ಪ್ರಯತ್ನಿಸುತ್ತಿರುವ ಶ್ರೀಯುತ ನಂದಗೋಪಾಲ್ ಶೆಣೈ ಅವರ ಮಾತುಗಳು ನೆರೆದಿರುವ ಜನರನ್ನು ಹೊಸ ವಿಚಾರಗಳ ಬಗ್ಗೆ ಚಿಂತನೆಗೆ ಹಚ್ಚುವಂತೆ ಮಾಡಿದವು.
ರಾಜಪುರ ಸಾರಸ್ವತ ಬ್ರಾಹ್ಮಣ. ಕುಡಾಳ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ, ವೈಶ್ಯವಾಣಿ ಸಮಾಜ, ಕ್ಯಾಥೊಲಿಕ್, ಮಡಿವಾಳ, ದೇಶ್ ಭಂಡಾರಿ, ದೈವಜ್ಞ ಬ್ರಾಹ್ಮಣ, ಜಿ.ಎಸ್.ಬಿ., ಖಾರ್ವಿ ಜನಾಂಗದ ಹಲವಾರು ನಾಯಕರು ಶುಭಾಶಂಸನೆಗೈದರು. ಈ ಸಮಾಜದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಅಂತೆಯೇ ವಿಶೇಷ ಆಕರ್ಷಣೆಯಾಗಿ ಕಾಸರಗೋಡು ಚಿನ್ನಾರವರ ಕೊಂಕಣಿಯ ಬಗ್ಗೆ ಕಳಕಳಿಯ ಮಾತುಗಳು. ಹಿಂದೆ ನಡೆದಂತಹ ಘರ್ ಘರ್ ಕೊಂಕಣಿಯ ಬಗ್ಗೆ ವಿವರಗಳು ಹಾಗೆ ಮುಂದೆ ಕೊಂಕಣಿ ಭಾಷಾ ಉದ್ದಾರಕ್ಕಾಗಿ ಮಾಡಲೇ ಬೇಕಾದಂತಹ ಕೆಲಸಗಳು ಇವುಗಳ ಬಗ್ಗೆ ಅತ್ಯಂತ ಸರಳವಾಗಿ ವಿವರವಾಗಿ ಹಾಗೂ ಆಕರ್ಷಣೀಯವಾಗಿ ಜನರ ಮನಸ್ಸನ್ನು ಸೂರೆಗೊಂಡವು. ಕಾರ್ಯಕ್ರಮದ ಕೊನೆಯಲ್ಲಿ ಮುಲ್ಕಿ ರವೀಂದ್ರ ಪ್ರಭು ಇವರಿಂದ ಶುಶ್ರಾವ್ಯವಾದ ಸಂಗೀತ ಕಾರ್ಯಕ್ರಮವು ಸಂಪನ್ನಗೊಂಡಿತು.