ಮಂಗಳೂರು : ಖ್ಯಾತ ಸಾಹಿತಿ ಹಿರಿಯ ಜಾನಪದ ವಿದ್ವಾಂಸರಾದ ಪ್ರೋ. ಅಮೃತ ಸೋಮೇಶ್ವರರು ದಿನಾಂಕ 06-01-2024ರಂದು ನಿಧನರಾಗದ್ದಾರೆ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಇರ್ವರು ಮಕ್ಕಳನ್ನು ಅಗಲಿದ್ದು, ಮೃತರು ಕಾವ್ಯ ಸಣ್ಣಕಥೆ, ನಾಟಕ, ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರಿನ ಕೋಟೆಕ್ಕಾರು ನಿವಾಸಿಯಾಗಿದ್ದ ಶ್ರೀಯುತರು ಎಂ.ಎ. ಪದವೀಧರರಾಗಿದ್ದು, ಮಂಗಳೂರಿನ ಸಂತ ಅಲೊಶಿಯಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು.
ನಿವೃತ್ತಿಯ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದರು. ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವರಾಗಿದ್ದರು.
1957ರಲ್ಲಿ ರಚಿಸಿದ ‘ಎಲೆಗಿಳಿ’ ಎಂಬ ಸಣ್ಣಕತೆಗಳ ಸoಕಲನ ಅವರ ಮೊದಲ ಕೃತಿ. ನಂತರ ‘ರುದ್ರಶಿಲೆ ಸಾಕ್ಷಿ’ , ‘ಕೆಂಪು ನೆನಪು’, ‘ವನಮಾಲೆ’, ‘ಭ್ರಮಣ’, ‘ಉಪ್ಪು ಗಾಳಿ’ ಮೊದಲಾದ ಕವನ ಸಂಕಲನ, ‘ತೀರದ ತೆರೆ’ ಎಂಬ ಕಾದಂಬರಿ, ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ‘ಅವಿಲು’, ‘ತುಳು ಬದುಕು’, ‘ಯಕ್ಷಗಾನ ಹೆಜ್ಜೆಗುರುತು’, ‘ಭಗವತಿ ಆರಾಧನೆ’, ‘ಮೋಯ-ಮಲೆಯಾಳ ನಿಘಂಟು’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತುಳುವಿನಲ್ಲೂ ಬರೆಯಬಲ್ಲ ಅಮೃತರು ‘ತಂಬಿಲ’, ‘ರಂಗಿತ’ ಕವನ ಸಂಗ್ರಹ, ‘ಗೋಂದೋಳು’, ‘ರಾಯ ರಾವುತೆ’ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದು.
Subscribe to Updates
Get the latest creative news from FooBar about art, design and business.
Next Article ಅಂಬಲಪಾಡಿಯಲ್ಲಿ ‘ಅಂಬಲಪಾಡಿ ನಾಟಕೋತ್ಸವ -2023’ದ ಉದ್ಘಾಟನೆ