ಮಂಗಳೂರು : ಭರತಾಂಜಲಿ (ರಿ) ಕೊಟ್ಟಾರ ಮಂಗಳೂರು ಇದರ ಕಿಂಕಿಣಿ ತ್ರಿoಶತ್ ಸಂಭ್ರಮದಲ್ಲಿ ಆಯೋಜಿಸಿದ ‘ನೃತ್ಯಾಮೃತಂ 2೦25’ ಕಾರ್ಯಕ್ರಮ ದಿನಾಂಕ 06 ಜುಲೈ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಯತಿವರೇಣ್ಯರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು “ಬಾಲ್ಯದಲ್ಲಿ ಮಕ್ಕಳಲ್ಲಿ ಕಲಾಭಿವೃದ್ಧಿ ಬೆಳೆಸಬೇಕು ಅದು ಹೆಮ್ಮರವಾಗಿ ಬೆಳೆದು ಬಾಳಿಗೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ದಾರಿದೀಪವಾಗಬಲ್ಲದು. ಋಷಿಮುನಿಗಳು ಧಾರ್ಮಿಕ ಮಹತ್ವಗಳ ಜೊತೆಗೆ ಮನುಷ್ಯನ ಮಾನಸಿಕ ಅಭಿವೃದ್ಧಿಗೆ ಕೊಟ್ಟಂತಹ ದೊಡ್ಡ ಕೊಡುಗೆ ಈ ನೃತ್ಯ ಕಲೆ, ಭರತಾಂಜಲಿ ಸಂಸ್ಥೆಯು ಕಳೆದ 30 ವರ್ಷಗಳಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ಕಲಾ ಸೇವೆ ಮಾಡುತ್ತಿರುವುದು ಅಭಿನಂದನೀಯ” ಎಂದು ಹರಸಿದರು.
ನಟರಾಜನಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಮಾತನಾಡಿ “ಶಾಸ್ತ್ರೀಯ ಚೌಕಟ್ಟನ್ನು ಸರಳಗೊಳಿಸದೆ ಅದರೊಳಗೆ ಹೊಸತನವನ್ನು ಅಳವಡಿಸಿ ಕೊಂಡಾಗ ಪರಂಪರೆ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಭರತಾಂಜಲಿಯ ತನ್ನ ಶಿಷ್ಯರಾದ ಶ್ರೀಧರ ಹೊಳ್ಳ ಮತ್ತು ಪ್ರತಿಮಾ ಶ್ರೀಧರ್ ರವರ ಸಾಧನೆ ಮೆಚ್ಚುವಂಥದ್ದು” ಎಂದು ಹಾರೈಸಿದರು.
ಶಿವಂ ಕನ್ಸ್ಟ್ರಕ್ಷನ್ ಇದರ ಮಾಲಕರಾದ ವಿಶ್ವೇಶ್ವರ್ ಮಾತನಾಡಿ “ನೃತ್ಯ ಕಲೆಯಾಗಿ ಉಳಿಯದೆ ಅದು ಭಾರತೀಯ ಪರಂಪರೆಯ ಒಂದು ಭಾಗವಾಗಿದೆ. ಇದನ್ನು ಪೋಷಕರು ಮನಗಂಡು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಕಳೆದ 30 ವರ್ಷಗಳಲ್ಲಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಿಸಿಕೊಂಡಿರುವ ಕಲಾ ಸಂಸ್ಥೆ ಇದೊಂದು ಮಾದರಿ” ಎಂದರು.
ಕಾರ್ಯಕ್ರಮದಲ್ಲಿ ಶ್ರೀಧರ ಹೊಳ್ಳ ಸ್ವಾಗತಿಸಿ, ಪ್ರಕ್ಷಿಲಾ ಜೈನ್ ನಿರೂಪಿಸಿ, ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಮಾನಸ ಕುಲಾಲ್, ಅದಿತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ವಿದುಷಿ ರಾಜಶ್ರೀ ಉಳ್ಳಾಲ್, ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ವಿದುಷಿ ಶಾರದಾ ಮಣಿ ಶೇಖರ್ ಇವರನ್ನು ಭರತಾಂಜಲಿಯ ಪರವಾಗಿ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಗೌರವಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭರತಾಂಜಲಿಯ ಸಿಂಧೂರ ಘಟಕ ಗಣೇಶಪುರ ಇಲ್ಲಿನ ಮಕ್ಕಳಿಂದ ನೃತ್ಯ ಸಂಭ್ರಮ ಸಂಪನ್ನಗೊಂಡಿತು.