ಕಿನ್ನಿಗೋಳಿ : ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಈವರೆಗೆ 168 ಕೃತಿಗಳು ಪ್ರಕಟವಾಗಿದ್ದು 169ನೆಯದಾಗಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಲೇಖನಗಳ ಕೃತಿ ‘ತಲ್ಲಣಿಸದಿರು ಮನವೆ’, 170ನೆಯ ಕಾದಂಬರಿ ಕೃತಿ ‘ಕೂಡುಮನೆ’,ಹಾಗೂ 171ನೆಯ ಕೃತಿ ಟಿ.ಎಂ. ರಮೇಶ್ ಅವರ ಲಲಿತಪ್ರಬಂಧಗಳ ಸಂಕಲನ ‘ನಗುಬಿಗು’ ಬಿಡುಗಡೆ ಸಮಾರಂಭ ದಿನಾಂಕ 28-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಡಾ. ಮೋಹನ ಆಳ್ವ ಮಾತನಾಡುತ್ತಾ “ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮತ್ತು ಸಾಹಿತ್ಯದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆ ಮೂಲಕ ಕನ್ನಡದ ಮನಸ್ಸುಗಳು ಸದಾ ಕ್ರಿಯಾಶೀಲವಾಗಿತ್ತದೆ.” ಎಂದು ಹೇಳಿದರು.
ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿ “ಕಿನ್ನಿಗೋಳಿಯ ಅನಂತ ಪ್ರಕಾಶ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಚಟುವಟಿಕೆಗಳು ಅಭಿನಂದನೀಯ. ಕಲ್ಚಾರ್ ಅವರ ಕೃತಿಯ ಓದು ಪುರಾಣದ ಜ್ಞಾನದಾಹಿಗೆ ಉತ್ತಮ ಕೃತಿ.” ಎಂದರು.
ಉಡುಪಿಯ ಮುರಳಿ ಕಡೆಕಾರ್ ಮಾತನಾಡಿ, “ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲ್ಚಾರ್ ಅವರ ಕಾದಂಬರಿ ‘ಕೂಡುಮನೆ’ ಸರಾಗವಾಗಿ ಓದಿಸಿಕೊಂಡು ಹೋಗುವ ಉತ್ತಮ ಕೃತಿ. ಹಿಂದಿನ ಕೂಡು ಕುಟುಂಬದ ಬಾಂಧವ್ಯದ ಸೊಗಸು ಇಂದಿಲ್ಲ. ಸ್ವಾರ್ಥದ ಬದುಕಿನ ಮನಸ್ಥಿತಿಯಿಂದಾಗಿ ಮನೆಗಳು ಒಡೆದು ಹೋಗುತ್ತಿವೆ.” ಎಂದರು.
ಅನಂತ ಪ್ರಕಾಶ ಸಂಸ್ಥೆಯ ಕೊಡೆತ್ತೂರು ಸಚ್ಚಿದಾನಂದ ಉಡುಪ, ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಉಪಸ್ಥಿತರಿದ್ದರು. ಕೊಡೆತ್ತೂರು ವೇದವ್ಯಾಸ ಉಡುಪ ಅವರು ಸ್ವಾಗತಿಸಿ, ಪ್ರಕಾಶ್ ಆಚಾರ್ ಅವರು ವಂದಿಸಿದರು. ಬಳಿಕ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ‘ಕರ್ಣ ಬೇಧನ’ ತಾಳಮದ್ದಲೆ ನಡೆಯಿತು.