ಮಂಗಳೂರು : 76ನೇ ವರ್ಷಾಚರಣೆಯಲ್ಲಿರುವ ‘ಯುಗಪುರುಷ’ದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ಅರ್ಚಕ ಸಂಮಾನ, ಕೃತಿ ಬಿಡುಗಡೆ ಸಮಾರಂಭ, ವಿದ್ಯಾರ್ಥಿವೇತನ ವಿತರಣೆ, ಸಾಂಸ್ಕೃತಿಕ ಸಮಾರಂಭವು ದಿನಾಂಕ 24-07-2023ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ.
ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿರುವರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಕದ್ರಿ ನವನೀತ ಶೆಟ್ಟಿ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯುಗಪುರುಷ ಶ್ರೀ ರಾಘವೇಂದ್ರ ಸ್ವಾಮಿ ಮಂದಿರದ ಅರ್ಚಕರಾದ ರಾಘವೇಂದ್ರ ಉಡುಪ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ಅರ್ಚಕರ ನೆಲೆಯಲ್ಲಿ ಗೌರವಿಸಲಾಗುವುದು.
ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕೆ. ಬಾಲಕೃಷ್ಣ ಉಡುಪ ರಚಿಸಿದ ‘ಸ್ಫೂರ್ತಿ’ ಹಾಗೂ ದೇವೇಂದ್ರ ಅಮೀನ್ ರಚಿಸಿದ ‘ಮಾಯದ ಮಾಣಿಕ್ಯ’ ಕೃತಿಗಳನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಬಿಡುಗಡೆಗೊಳಿಸಲಿರುವರು. ಸ್ಥಳೀಯ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು. ಮುಂಬೈ ವಿಜಯ ರೆಫ್ರಿಜರೇಶನ್‌ನ ಆಡಳಿತ ವ್ಯವಸ್ಥಾಪಕ ಟಿ. ರಾಮಚಂದ್ರ ಶೆಟ್ಟಿ, ಮಾತಾ ಡೆವಲಪ್ಪರ್ಸ್ ನ ಆಡಳಿತ ವ್ಯವಸ್ಥಾಪಕ ಸಂತೋಷ್ ಕುಮಾರ್ ಶೆಟ್ಟಿ, ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ರುಡಾಲ್ಫ್ ಜೋಯರ್ ನೋರೋನ್ಹಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ಮೂಲ್ಕಿ ವಲಯದ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ವಾಣಿ ಬಿ. ಆಚಾರ್ಯ ಮುಂತಾದವರು ಭಾಗವಹಿಸಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೆರೆಕಾಡಿನ ಶ್ರೀ ವಿನಾಯಕ ಯಕ್ಷ ಕಲಾ ತಂಡದಿಂದ ‘ಅತಿಕಾಯ-ಇಂದ್ರಜಿತು’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ
ಉಡುಪರು ತಿಳಿಸಿದ್ದಾರೆ.