ಉಡುಪಿ : ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ‘ಕಿಶೋರ ಯಕ್ಷಗಾನ ಸಂಭ್ರಮ -2023’ನ್ನು ದಿನಾಂಕ 07-12-2023ರಂದು ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡುತ್ತಾ “ಯಕ್ಷಗಾನ ವಾಚಿಕ, ಆಂಗಿಕ, ಆಹಾರ್ಯ ಹಾಗೂ ಸಾತ್ವಿಕ ಈ ನಾಲ್ಕೂ ಅಂಶಗಳನ್ನು ಒಳಗೊಂಡಿರುವ ಒಂದು ಪರಿಪೂರ್ಣ ಕಲಾಪ್ರಕಾರ. ಈ ಕಲಾಪ್ರಕಾರವನ್ನು ಬೆಳೆಸುವಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಮಹತ್ವದ ಪಾತ್ರವಹಿಸಿದೆ” ಎಂದು ಹೇಳಿದರು.
ಯಕ್ಷಶಿಕ್ಷಣ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಕೆ. ರಘುಪತಿ ಭಟ್ರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಡಾ. ಕೆ. ಅಶೋಕ್ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಉದ್ಯಮಿ ಪಿ. ಗೋಕುಲ್ನಾಾಥ್ ಪ್ರಭು, ಖ್ಯಾತ ವೈದ್ಯ ಡಾ. ಜೆ.ಎನ್. ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಮುರಲಿ ಕಡೆಕಾರ್ ಸಂಯೋಜಿಸಿದ ಕಾರ್ಯಕ್ರಮವನ್ನು ನಾರಾಯಣ ಎಂ. ಹೆಗಡೆ ನಿರೂಪಿಸಿ, ಎ. ನಟರಾಜ ಉಪಾಧ್ಯ ಧನ್ಯವಾದ ಸಲ್ಲಿಸಿ, ಹೆಚ್.ಎನ್. ಶೃಂಗೇಶ್ವರ ಸಹಕರಿಸಿದರು. ಆರಂಭದಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ನಪ ವಿದ್ಯಾರ್ಥಿಗಳಿಂದ ‘ಕನಕಾಂಗಿ ಕಲ್ಯಾಣ’, ಬಳಿಕ ಮಣಿಪಾಲದ ಮಾಧವಕೃಪಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘ವಿದ್ಯುನ್ಮತೀ ಕಲ್ಯಾಣ’ ಪ್ರದರ್ಶನಗೊಂಡವು. ಉಡುಪಿ ಆಸುಪಾಸಿನ 28 ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನ ಡಿಸೆಂಬರ್ 20ರವರೆಗೆ ನಡೆಯಿತು.