ಉಡುಪಿ : ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಯಕ್ಷಗಾನ ಕಲಾ ರಂಗ (ರಿ.) ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಯಕ್ಷಶಿಕ್ಷಣ ಟ್ರಸ್ಟಿನಿಂದ ಪ್ರೌಢಶಾಲಾ ವ್ಯಾಪ್ತಿಯಲ್ಲಿ ನಡೆಯುವ ಯಕ್ಷಗಾನ ತರಬೇತಿಗಳ ಪ್ರದರ್ಶನ, ‘ಕಿಶೋರ ಯಕ್ಷಗಾನ ಸಂಭ್ರಮ – 2023’ವು ದಿನಾಂಕ 29-11-2023ರಿಂದ 05-01-2023ರವರೆಗೆ ನಡೆಯಲಿದೆ.
ದಿನಾಂಕ 29-11-2023ರಂದು ಸಂಜೆ 6.30ಕ್ಕೆ ಬ್ರಹ್ಮಾವರದ ಬಂಟರ ಭವನದ ಮುಂಭಾಗದ ವೇದಿಕೆಯಲ್ಲಿ ಉದ್ಘಾಟನೆ ನಡೆಯಲಿದೆ. ಪ್ರತಿದಿನ 1.30 ಗಂಟೆ ಅವಧಿಯ ಎರಡು ಪ್ರಸಂಗ ಪ್ರದರ್ಶನಗೊಳ್ಳಲಿದೆ. ಬ್ರಹ್ಮಾವರ ಬಂಟರ ಭವನದ ಬಳಿ, ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿ, ಶಿರ್ವದ ಮಹಿಳಾ ಸೌಧ, ಪಡುಕೆರೆ ಮಣೂರು ಸರಕಾರಿ ಸಂಯುಕ್ತ ಪ್ರೌಢ ಶಾಲಾ ವಠಾರ ಮತ್ತು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ವಠಾರ ಸೇರಿದಂತೆ ಒಟ್ಟು 6 ವೇದಿಕೆಗಳಲ್ಲಿ 70 ಪ್ರದರ್ಶನಗಳು ನಡೆಯಲಿದೆ.
ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ವ್ಯಾಪ್ತಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಾ ಬಂದಿದೆ. ಈ ವರ್ಷ ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೂ ವಿಸ್ತರಿಸಿದೆ. ಒಟ್ಟು 69 ಶಾಲೆಗಳಲ್ಲಿ 31 ಗುರುಗಳು ಈ ಮಹಾಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.