ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷದ ಸಂಸ್ಥಾಪಕ ದಿ. ಕೊ. ಅ. ಉಡುಪ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದ ವಿದ್ವಾಂಸರ ಸನ್ಮಾನ, ಕೃತಿ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ 24 ಜುಲೈ 2024ರಂದು ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ, “ದಿ. ಕೊ. ಅ. ಉಡುಪರು ಆದರ್ಶ ಕೃಷಿಕರಾಗಿ, ಉತ್ತಮ ಗುರುಗಳಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಅಜಾತಶತ್ರುವಾಗಿದ್ದು ಅವರ ಸಾಧನೆಗಳು ಕಾಲಕಾಲಕ್ಕೂ ಪ್ರಸ್ತುತ” ಎಂದರು.
ಉಳೆಪಾಡಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಡಪದವು ರಾಧಾಕೃಷ್ಣ ತಂತ್ರಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಎಂ.ವಿ. ಭಟ್ ರಚಿತ ‘ಆಧುನಿಕ ಭಾರತ’ ಕೃತಿಯನ್ನು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶ್ರೀನಾಥ ಎಂ.ಪಿ. ಇವರು ಲೋಕಾರ್ಪಣೆಗೊಳಿಸಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ವಿರಾರ್ ಶಂಕರ್ ಶೆಟ್ಟಿ, ಬಿ.ಜೆ.ಪಿ. ನಾಯಕ ಕೆ.ಪಿ. ಸುದರ್ಶನ್, ಕಸ್ತೂರಿ ಪಂಜ, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಪೃಥ್ವಿರಾಜ ಆಚಾರ್ಯ, ಬಾಲಕೃಷ್ಣ ಉಡುಪ, ಉದ್ಯಮಿ ಸುಧಾಕರ ಆಳ್ವ, ವರಿಷ್ಠ ಅಂಚೆಪಾಲಕ ಶ್ರೀನಾಥ್ ಬಸ್ರೂರು, ಡಾ. ನಯನಾಭಿರಾಮ ಉಡುಪ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಭುವನಾಭಿರಾಮ ಉಡುಪ ಸ್ವಾಗತಿಸಿ, ಪತ್ರಕರ್ತ ಶರತ್ ಶೆಟ್ಟಿ ನಿರೂಪಿಸಿದರು.