ಸೋಮವಾರಪೇಟೆಯಲ್ಲಿ ಪೂಜಾ ಸಾಮಾಗ್ರಿಗಳ ಮಳಿಗೆಯನ್ನು ಹೊಂದಿರುವ ಗಣೇಶ್ ಪಿ.ಎಲ್. ಇವರ ಸತಿಯಾಗಿ ಕೊಡಗಿಗೆ ಬಂದವರು ಯಶಸ್ವಿ ಗಣೇಶ್ ಸೋಮವಾರಪೇಟೆ. ಈ ಹಿಂದೆ ಕರ್ನಾಟಕ ರಾಜ್ಯವಾಗಿದ್ದ ಕಾಸರಗೋಡು ತಾಲೂಕಿನ ಪೆರ್ಲ ಗ್ರಾಮದ ಭಾಸ್ಕರ ನಾಯಕ್ ಮತ್ತು ರೇಖಾ ದಂಪತಿಯ ಪುತ್ರಿ. ತಮ್ಮ ವಿದ್ಯಾಭ್ಯಾಸವನ್ನು ಕೇರಳ ರಾಜ್ಯದಲ್ಲಿ ಇದ್ದರೂ ಸಹ ಕನ್ನಡದಲ್ಲಿಯೇ ಮಾಡಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಶ್ರೀ ಭಾರತೀ ವಿಧ್ಯಾಪೀಠ ಶಾಲೆ, ಬದಿಯಡ್ಕದಲ್ಲಿ 5ರಿಂದ 10ನೆಯ ತರಗತಿಯವರೆಗೆ ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ ಮುಗಿಸಿ ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿಯನ್ಮು ಪಡೆದಿದ್ದಾರೆ. ಮುಂದೆ ಮೈಸೂರು ಜ್ಞಾನಗಂಗೋತ್ರಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಎಳೆಯ ವಯಸ್ಸಿನಿದಲೇ ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದವರು ಮದುವೆಯ ನಂತರವೂ ತಮ್ಮ ಮನೆಯವರ ಪ್ರೋತ್ಸಾಹದಿಂದ ಬರವಣಿಗೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇವರು ತಮ್ಮ ‘ಮೌನರಾಗ’ ಕವನ ಸಂಕಲನವನ್ನು ಇತ್ತೀಚೆಗೆ ನೆಲ್ಲಿಹುದಿಕೇರಿಯಲ್ಲಿ ನಡೆದ ರಾಜ್ಯ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿ ಸಾರಸ್ವತ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಲೇಖನ ಮತ್ತು ಕವನಗಳು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಪ್ರೇಮಿಗಳ ದಿನದ ಮಹತ್ವದ ಬಗ್ಗೆ ಬರೆದ ಲೇಖನಕ್ಕೆ ದ್ವಿತೀಯ ಬಹುಮಾನ ಗಳಿಸಿರುತ್ತಾರೆ. “ನನ್ನ ಮೊದಲ ಕವಿತೆ ಹುಟ್ಟಿದ್ದು ನನ್ನ ಪದವಿ ಪೂರ್ವ ಕಾಲೇಜಿನ ವ್ಯಾಸಂಗದ ಸಮಯದಲ್ಲಿ ಪರೀಕ್ಷೆಗೆ ಓದುತ್ತಿರುವಾಗ ತುಂಬಾ ನಿಶ್ಯಬ್ದ ವಾತಾವರಣದಲ್ಲಿ ಮನದಲ್ಲಿ ಪದಗಳ ಸಾಲುಗಳು ಓಡಾಡುತ್ತ ಓದಿಗೆ ಏಕಾಗ್ರತೆ ನೀಡಲಾಗದ ಆ ಸಮಯದಲ್ಲಿ ಮನದಲ್ಲಿ ಮೂಡಿದ ಸಾಲುಗಳನ್ನು ಬರೆಯಲು ಶುರು ಮಾಡಿದೆ. ಅದು ಮುಂದೆ ನನಗೆ ಹವ್ಯಾಸವಾಗಿ ಮೆಚ್ಚುಗೆಯಾಗಿ ಆಸಕ್ತಿ ಬೆಳೆಯಿತು. ಕವನ ರಚನೆ ನನಗೆ ಅಚ್ಚು ಮೆಚ್ಚಿನ ವಿಷಯ.” ಎಂದು ಹೇಳುತ್ತಾರೆ.
“ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿ ರಕ್ತಗತವಾದ ಕ್ರಿಯಾತ್ಮಕ ಕಲೆ ಇರುತ್ತದೆ. ಮೊದಲಿಗೆ ಅದು ಅವರಿಗೆ ಹವ್ಯಾಸವಾಗಿರುತ್ತದೆ. ಅಂತಹ ಹವ್ಯಾಸಗಳನ್ನು ಹೆಚ್ಚು ಕ್ರಿಯಾತ್ಮಕವಾಗಿ ಬೆಳೆಸಿಕೊಂಡು ಬಂದರೆ ಮುಂದೊಂದು ದಿನ ಆಯಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತಮ್ಮ ಆಂತರ್ಯದ ಕಲಾತ್ಮಕ ಕ್ರಿಯೆಯನ್ನು ಉತ್ತೇಜಿಸಿ ಅದರಲ್ಲಿ ಸಾಧನೆ ಮಾಡುವಂತಹ ಮನೋಬಾವವನ್ನು ಯುವ ಜನತೆ ಬೆಳೆಸಿಕೊಳ್ಳಬೇಕು” ಎಂದು ಇಂದಿನ ಸಾಹಿತ್ಯಾಸಕ್ತರಿಗೆ ತಮ್ಮ ಕಿವಿಮಾತುಗಳನ್ನು ಹೇಳುತ್ತಾರೆ. ಇವರು ಪತಿ ಮತ್ತು 6 ವರ್ಷದ ಮಗಳೊಡನೆ ಸೋಮವಾರಪೇಟೆಯಲ್ಲಿ ವಾಸವಾಗಿದ್ದಾರೆ. ಇವರ ಮುಂದಿನ ಬದುಕು ಬರಹಗಳು ಇನ್ನಷ್ಟು ಉನ್ನತಿಗೇರಿ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಹಾರೈಸೋಣ.
ವೈಲೇಶ್ ಪಿ.ಎಸ್. ಕೊಡಗು (8861405738 ದೂರವಾಣಿ)
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.