ಬೊಳ್ಳಜಿರ ಬಿ. ಅಯ್ಯಪ್ಪ ಇವರು ಹುದಿಕೇರಿಯ ಬೊಳ್ಳಜಿರ ಬೋಪಯ್ಯ ಯಶೋದಾ ದಂಪತಿಗಳ ಪುತ್ರ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದಾರೆ. ಇದೀಗ ಅದೇ ಕಾಲೇಜಿನಲ್ಲಿ ಕೊಡವ ಎಂ.ಎ. ವ್ಯಾಸಂಗ ಮಾಡುತ್ತಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿರುವ ಇವರು ಪ್ರವೃತ್ತಿಯಿಂದ ಓದು ಮತ್ತು ಬರಹದ ಜೊತೆಗೆ ಸಾಹಿತ್ಯದ ಸೇವೆ ಮತ್ತು ಸಮಾಜ ಸೇವೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಇವರ ಸಂಪಾದಕೀಯದಲ್ಲಿ ‘ಚಂಗೀರ’ (ಸಂಶೋಧನಾ ಕೃತಿ), ‘ಒತ್ತಜೋಡಿ’ (ಅಭಿನಂದನಾ ಗ್ರಂಥ) ಹಾಗೂ ಆಟ್‌ಪಾಟ್ ಪಡಿಪು (ಮಕ್ಕಳ ಕಲಿಕೆಗೆ ಒತ್ತುಕೊಡುವ ವಿಷಯಗಳ ಸಂಗ್ರಹ ಪುಸ್ತಕ) ಎಂಬ ಒಟ್ಟು ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಕಳೆದ ಏಳು ವರ್ಷಗಳಿಂದ ಆಟ್ ಪಾಟ್ ಪಡಿಪು ಕಾರ್ಯಕ್ರಮ ಚಾಲನೆಯಲ್ಲಿದ್ದು ಸರಿ ಸುಮಾರು 4000 ಕೃತಿಗಳನ್ನು ಉಚಿತವಾಗಿ ಮಕ್ಕಳಿಗೆ ಮತ್ತು ಆಸಕ್ತರಿಗೆ ಹಂಚಿರುತ್ತಾರೆ. 2013ನೇ ಇಸವಿಯಿಂದ ಕೊಡವ ಮಕ್ಕಡ ಕೂಟ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕೊಡವ, ಕನ್ನಡ ಎಂಬ ಭೇದ ಭಾವ ಇಲ್ಲದೆಯೇ ಸಾಹಿತ್ಯದ ಹಾಗೂ ಕೊಡಗಿಗೆ ಸಂಬಂಧಿಸಿದ 58 ಕೃತಿಗಳನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಪ್ರಕಟಿಸಿ ಲೋಕಾರ್ಪಣೆ ಮಾಡಲು ಕಾರಣೀಕರ್ತರಾಗಿದ್ದಾರೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾಗಿ, ಕೊಡಗು ಪ್ರೆಸ್ ಕ್ಲಬ್‌ನ ಖಜಾಂಚಿಯಾಗಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ನಿರ್ದೇಶಕರಾಗಿ, ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ ಗೌರವ ಕಾರ್ಯದರ್ಶಿಯಾಗಿ ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೊಳ್ಳಜಿರ ಕುಟುಂಬದ ನಿರ್ದೇಶಕರಾಗಿರುವ ಅಯ್ಯಪ್ಪ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು. ‘ಕೊಡಗ್‌ರ ಸಿಪಾಯಿ’ ಹಾಗೂ ‘ನಾಡ ಪೆದ ಆಶಾ’ (ನಾಯಕ ನಟ), ‘ಪೊಮ್ಮಾಲೆ ಕೊಡಗ್” ಕೊಡವ ಸಿನಿಮಾದಲ್ಲಿ ನಟಿಸಿದ್ದಾರೆ. ಮಹಾವೀರ ಚಕ್ರ ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಅನಾವರಣಕ್ಕೆ ಕಾರಣಕರ್ತರಾದ ಇವರು ಕೊಂಗಂಡ ಗಣಪತಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗ್ ರ ಗಾಂಧಿ ಸ್ವಾತಂತ್ರ್ಯ ಹೋರಾಟಗಾರರಾದ ಪಂದ್ಯಂಡ ಬೆಳ್ಯಪ್ಪ, ಕೊರವಂಡ ನಂಜಪ್ಪ ಇವರ ಹೆಸರುಗಳನ್ನು ರಸ್ತೆಗೆ ಇಡುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವರು. ಈ ಹಿಂದೆ ಕನ್ನಡ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ‘ಫ್ಯಾಮಿಲಿ ಪವರ್ ರಿಯಾಲಿಟಿ ಶೋ’ದಲ್ಲಿ ಇವರ ಸಂಸಾರ ಭಾಗವಹಿಸಿ ಗೆದ್ದ 2 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವನ್ನು ಸೇನೆಯಲ್ಲಿ ಮೃತಪಟ್ಟ ಸೈನಿಕರ ಕುಟುಂಬಕ್ಕೆ ದಾನವಾಗಿ ನೀಡಿರುತ್ತಾರೆ. ಕಳೆದ 9 ವರ್ಷದಿಂದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ಸ್ಮರಣಾ ದಿನದ ಕಾರ್ಯಕ್ರಮ, ಕಳೆದ 7 ವರ್ಷದಿಂದ ಎಡಮ್ಯಾರ್ ಒಂದ್ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಇವರು 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ವತಿಯಿಂದ ಸಂಸ್ಕರಣ ಗ್ರಾಮೀಣ ವರದಿಗಾರಿಕೆಗಾಗಿ ಹಿರಿಯ ಪತ್ರಕರ್ತ ದಿ. ಪದ್ಯಾಣ ಗೋಪಾಲ ಕೃಷ್ಣಭಟ್ ಪ್ರಶಸ್ತಿ, ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕನೆಕ್ಟಿಂಗ್ ಕೊಡವಾಸ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೊಡವ ಕೇರಿಯಿಂದ, ಕೊಡವ ಮಕ್ಕಡ ಕೂಟದಿಂದ, ಅಜ್ಜಮಾಡ ಕುಟುಂಬದಿಂದ ಹಾಗೂ ಇನ್ನಿತರ ಹಲವು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇವರು ಪತ್ನಿ ಯಮುನಾ ಹಾಗೂ ಮಕ್ಕಳಾದ ದೇಚಮ್ಮ ಹಾಗೂ ಬೋಪಣ್ಣರೊಂದಿಗೆ ಮಡಿಕೇರಿಯಲ್ಲಿ ವಾಸವಾಗಿದ್ದಾರೆ. ಇವರಿಂದ ಕೊಡಗಿನ ಸಾರಸ್ವತ ಲೋಕಕ್ಕೆ ಇನ್ನಷ್ಟು ಸೇವೆ ದೊರಕುವಂತಾಗಲಿ ಎಂದು ಹಾರೈಸೋಣ.
– ವೈಲೇಶ್ ಪಿ.ಎಸ್. ಕೊಡಗು (8861405738 ದೂರವಾಣಿ)
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.