ಕೊಡಗು : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಮತ್ತು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ‘ಕೊಡವ ಬಲ್ಯ ನಮ್ಮೆ 2025’ ಎರಡು ದಿನಗಳ ಕಾರ್ಯಕ್ರಮವು ದಿನಾಂಕ 29 ಮತ್ತು 30 ಮಾರ್ಚ್ 2025ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಕೊಡವ ಸಮಾಜದಲ್ಲಿ ನಡೆಯಿತು. ಕೊಡವ ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಮತ್ತು ದುಡಿ ತಾಳ ಕೊಡ್ ಪ ಆಯಿಮೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಡವ ಭಾಷೆಯ ಕವಿಗೋಷ್ಠಿಯೂ ನಡೆಯಿತು. ಆಹ್ವಾನಿತ ಕವಿಗಳಾದ ಶ್ರೀಮತಿ ಪುತ್ತಾಮನೆ ವಿದ್ಯಾ ಜಗದೀಶ್, ಕೋಟೆರ ಉದಯ ಪೂಣಚ್ಚ, ಶ್ರೀಮತಿ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಶ್ರೀ ವೈಲೇಶ ಪಿ.ಎಸ್. ಕೊಡಗು, ಶ್ರೀಮತಿ ಬಾದುಮಂಡ ಬೀನ ಕಾಳಯ್ಯ, ಶ್ರೀ ಕಾಣತಂಡ ವಿವೇಕ್ ಅಯ್ಯಪ್ಪ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಶ್ರೀ ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಶ್ರೀ ಪಂದ್ಯಂಡ ರೇಣುಕಾ ಸೋಮಯ್ಯ ಮತ್ತು ಹಿರಿಯ ಕವಯಿತ್ರಿ ಶ್ರೀಮತಿ ಮೂಕೊಂಡ ಪುಷ್ಪ ಪೂಣಚ್ಚ ಇವರುಗಳು ಕವನ ವಾಚನ ಮಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಅಜ್ಜಿನಿಕಂಡ ಮಹೇಶ್ ನಾಚಯ್ಯ ಇವರ ಉಪಸ್ಥಿತಿಯಲ್ಲಿ ಕ್ಯಾಪ್ಟನ್ ಬಿದ್ದಂಡ ಡಿ. ನಾಣಯ್ಯನವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜೆ. ಅನಂತ ಶಯನರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆರು ಮಂದಿಗೆ ಗೌರವ ಪ್ರಶಸ್ತಿ, ನಾಲ್ವರಿಗೆ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಡವ ಸಂಸ್ಕೃತಿ, ಪಾಟ್-ಪಡಿಪು ಕ್ಷೇತ್ರದ ಸಾಧಕರಾದ ಕೋಡಿಮಣಿಯಂಡ ತಮ್ಮಣಿ ಬೋಪಯ್ಯ, ಕೊಡವ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕರಾದ ಕಾಟಿಮಡ ಜಿಮ್ಮಿ ಅಣ್ಣಯ್ಯ, ಕೊಡವ ಜಾನಪದ ಕ್ಷೇತ್ರದಲ್ಲಿ ಚೇನಂಡ ರಘು ಉತ್ತಪ್ಪ, ದಾನ-ಧರ್ಮ, ಸಮಾಜ ಸೇವೆಯಲ್ಲಿ ಕೈಬುಲಿರ ಪಾರ್ವತಿ ಬೋಪಯ್ಯ, ಕೊಡವ ಆಟ್-ಪಾಟ್ ಸಂಸ್ಕೃತಿ ಕ್ಷೇತ್ರದಲ್ಲಿ ಚೀಯಕಪೂವಂಡ ಬಿ. ದೇವಯ್ಯ, ಜನಸೇವೆಗಾಗಿ ಹೀರಕುಟ್ಟಡ ಟಸ್ಸಿ ಸದನ್ ಇವರುಗಳಿಗೆ ತಲಾ ರೂ. ಐವತ್ತು ಸಾವಿರ, ಶಾಲು ನೀಡಿ ಸನ್ಮಾನಿಸಲಾಯಿತು.
ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಹಿತಿಗಳಾದ ಮೂಪಾಜೆ ನಿಗಂಟು ಕರ್ತೃ ಮಚ್ಚಮಡ ಲಾಲ ಕುಟ್ಟಪ್ಪ, ಕೊಡವ ಸಂಸ್ಕೃತಿರ ಅಧ್ಯಯನ ನಡೆಸಿ ಬರೆದ ಪುಸ್ತಕ ಕತೃ ಐಚಂಡ ರಶ್ಮಿ ಮೇದಪ್ಪ, ನಾಡ ಕೊಡಗ್ ಕಾದಂಬರಿ ಕೊಟ್ಟತ್ತಿರ ಪ್ರಕಾಶ್ ಕಾರ್ಯಪ್ಪ, ಅಗ್ಗೇನ ಕತೆಗೆ ಚೊಟ್ಟೆಯಂಡಮಡ ಲಲಿತ ಕಾರ್ಯಪ್ಪ ಇವರುಗಳಿಗೆ ಈ ಸಂದರ್ಭದಲ್ಲಿ ತಲಾ ಇಪ್ಪತ್ತೈದು ಸಾವಿರ, ಶಾಲು ನೀಡಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಜಾನಪದ ಮೆರವಣಿಗೆ, ಕೊಡವ ಆಟ್ ಪಾಟ್ ಸ್ಪರ್ಧೆ, ಪುಸ್ತಕ ಬಿಡುಗಡೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಚಾರಗೋಷ್ಠಿ, ಕವಿಗೋಷ್ಠಿ, ಅಕಾಡೆಮಿಯ ಗೌರವ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಯಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಶ್ರೀಮತಿ ಪ್ರಮೀಳಾ ನಾಚಯ್ಯ ಇವರ ಜೊತೆಗೆ ಅಕಾಡೆಮಿಯ ಸರ್ವ ಸದಸ್ಯರು ಮತ್ತು ಹಲವಾರು ತೀರ್ಪುಗಾರರು, ಜಿಲ್ಲೆಯ ಶಾಸಕರು, ರಾಜಕೀಯ ಖ್ಯಾತನಾಮರು ಸಹ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು.