ಮಂಗಳೂರು: ದೇಶಾಭಿಮಾನ ಹೆಚ್ಚಿಸುವ, ಕೊಂಕಣಿ ಮಾನ್ಯತೆಯನ್ನು ಸಂಭ್ರಮಿಸುವ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 260ನೇ ಕಾರ್ಯಕ್ರಮ ಕೊಂಕಣ್ ಭಾರತ್ (ಸಂಗೀತ್ ಎಕ್ಸ್ ಪ್ರೆಸ್) ಸಂಗೀತ ಸಂಜೆ ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 06-08-2023ರಂದು ಜರಗಿತು.
ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಜೋಡಿ ಲವೀನಾ-ಅನಿಲ್ ಪಾಯ್ಸ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸ್ಪ್ಯಾನಿ ಆಲ್ವಾರಿಸ್ ಉಪಸ್ಥಿತರಿದ್ದರು.
ರೈನಾ ಸಿಕ್ವೇರಾ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಿತು. ಮೊದಲಿಗೆ ಇತ್ತೀಚೆಗೆ ನಿಧನ ಹೊಂದಿದ ಕೊಂಕಣಿ ಗಾಯಕ ಕ್ಲೊಡ್ ಡಿ’ಸೋಜಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಅವರೇ ರಚಿಸಿದ ‘ಸಂಸಾರಾ’ ಹಾಡನ್ನು ಸಿಮೋನ್ ಮೊಂತೇರೊ ಹಾಡಿದರು. ಅನಂತರ ಕೊಂಕಣಿ ಭಾಷೆಯ ಬಗ್ಗೆ, ಭಾರತ ದೇಶದ ಬಗ್ಗೆ ಮನಸ್ಸಿಗೆ ಮುದ ನೀಡುವ ವಿವಿಧತೆಯಲ್ಲಿ ಏಕತೆ ಸಾರುವ ಹಿರಿ ಕಿರಿಯ ಗೀತ ರಚನಾಕಾರರ ಸುಂದರ 12 ಹಾಡುಗಳನ್ನು ವಿವಿಧ ವಯೋಮಾನದ ಗಾಯಕರು ಪ್ರಸ್ತುತ ಪಡಿಸಿದರು.
ಮೆಲ್ವಿನ್ ಪೆರಿಸ್, ಡೊ ಸೂರಜ್ ನೊರೊನ್ಹಾ, ಡೊ ಅರುಣಾ ನೊರೊನ್ಹಾ, ಸುನಿಲ್ ಮೊಂತೇರೊ, ಅನಿಲ್ ಡಿಕುನ್ಹಾ, ಕಿಂಗ್‌ಸ್ಲೀ ನಜ್ರೆತ್, ಜೊಯೆಲ್ ಅತ್ತೂರ್, ನೆಸ್ಟರ್ ಡಿ’ಸೋಜಾ, ಜೈಸನ್ ಗುರ್ಪುರ್, ಮೇಘಾ ಪೈ ಇವರೊಂದಿಗೆ ಕೇತನ್, ಬಿಂದು, ರಿಶಲ್, ಒಲಿಂಕಾ, ಮೆಲಿಸ್ಸಾ, ವರ್ಲಿನ್, ಹೇಯ್ಡನ್, ವೆಲನಿ, ಮಿನೊಲಾ, ಅಭಿಗೇಲ್, ಅಮಿಕಾ, ಮಿಶ್ರಾ, ಆರ್ವಿನ್, ಆಸ್ಟನ್, ನೇಹಾ, ಜೋಶ್ಯಾ, ಬೈನಾ, ಪ್ರಿನ್ಸಿಯಾ, ಪರ್ಲ್, ಕ್ರಿಶಲ್, ನೀಲ್, ಮೇಘನ್ ಇವರುಗಳು ಸುಮಧುರ ಕಂಠದಿಂದ ಹಾಡಿ ಈ ಸಂಜೆಯನ್ನು ರಸಭರಿತಗೊಳಿಸಿದರು.
ರೋಶನ್ ಬೇಳ (ಲೀಡ್ ಗಿಟಾರ್), ಸಂಜಯ್ ರಾಡ್ರಿಗಸ್ (ಕೀ ಬೋರ್ಡ್), ವಾಮನ್ ಬೈಲೂರ್ (ರಿದಮ್ ಪ್ಯಾಡ್), ಸಂಜೀತ್ ರಾಡ್ರಿಗಸ್ (ಡ್ರಮ್ಸ್) ಮತ್ತು ಸ್ಟಾಲಿನ್ ಡಿ’ಸೋಜಾ (ಬೇಸ್ ಗಿಟಾರ್) ಸಹಕರಿಸಿದರು. ಸ್ಪೀಡಲ್ ಮೆಂಡೊನ್ಸಾ ಕುಲಶೇಖರ ನಿರೂಪಿಸಿದರು.