ಚಿಕ್ಕಮಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಿದ್ದು, ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬೆಳವಣಿಗಾಗಿ ನಿರಂತರ ಶ್ರಮಿಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕೊಂಕಣಿಯ ಬಗ್ಗೆ ಜನರಿಗೆ ತಿಳಿಸಿಕೊಡುತ್ತಾ ಬಂದಿದೆ. ಕೊಂಕಣಿ ಭಾಷಾ ಸಮುದಾಯದ ಜನರನ್ನು ಒಗ್ಗೂಡಿಸುವ ಸಲುವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಥೊಲಿಕ್ ಕೊಂಕಣಿ ರಾಕಣ್ ಸಂಚಾಲನ ಇವರ ಸಹಯೋಗದಲ್ಲಿ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ದಿನಾಂಕ 14 ಡಿಸೆಂಬರ್ 2025ರಂದು ‘ಕೊಂಕಣಿ ಕಲೋತ್ಸವ-2025’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 9-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ನಡೆಯಲಿರುವುದು.
ಬೆಳಿಗ್ಗೆ 9-00 ಗಂಟೆಗೆ ಚಿಕ್ಕಮಗಳೂರು ಹಾಗೂ ಹಾಸನ ಪರಿಸರದವರಿಗೆ ವಿವಿಧ ವಿನೋದಾವಳಿ ಸ್ಪರ್ಧೆಗಳು ನಡೆಯಲಿರುವುದು. ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ನಗದು ರೂ.15,000/-, ದ್ವಿತೀಯ ಬಹುಮಾನ ನಗದು ರೂ.10,000/-, ತೃತೀಯ ಬಹುಮಾನ ನಗದು ರೂ.5,000/- ಪುರಸ್ಕಾರದೊಂದಿಗೆ ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು. ಜೊತೆಗೆ, ಅತ್ಯುತ್ತಮ ಕಾರ್ಯಕ್ರಮ ನಿರೂಪಕರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು.
ಅಪರಾಹ್ನ 3-00 ಗಂಟೆಗೆ ಕುವೆಂಪು ಕಲಾಮಂದಿರದಿಂದ ಐ.ಜಿ. ರಸ್ತೆಯ ಮೂಲಕ ಸಾಗಿ, ಹನುಮಂತಪ್ಪ ಸರ್ಕಲ್ನಿಂದ, ಎಂ.ಜಿ. ರಸ್ತೆಯ ಮುಖಾಂತರ ಕುವೆಂಪು ಕಲಾಮಂದಿರಕ್ಕೆ ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನೊಳಗೊಂಡ ಬೃಹತ್ ಸಾಂಸ್ಕೃತಿಕ ಮೆರವಣಿಗೆಯು ನಡೆಯಲಿರುವುದು.
ಸಂಜೆ 4-00 ಗಂಟೆಗೆ ಕಲಾತಂಡ ಪ್ರದರ್ಶನದೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿರುವುದು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿರುವರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಡಿ. ತಮ್ಮಯ್ಯರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಧಾನಪರಿಷತ್ತ್ ಸದಸ್ಯರಾದ ಶ್ರೀ ಸಿ.ಟಿ. ರವಿ ಹಾಗೂ ಶ್ರೀ ಎಸ್.ಎಲ್. ಭೋಜೆಗೌಡ, ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮದ ನಿರ್ದೇಶಕರಾದ ಶ್ರೀ ಹರ್ಷ ಮೆಲ್ವಿನ್ ಲಸ್ರಾದೊ, ಎಂ.ಸಿ.ಸಿ. ಬ್ಯಾಂಕ್ ಲಿ. ಇದರ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ, ಕಾಫಿ ಬೆಳೆಯ ಕೃಷಿಕರಾದ ಶ್ರೀ ಬಿ.ಎಚ್. ನರೇಂದ್ರ ಪೈ, ಸ್ಥಳೀಯ ಕಥೊಲಿಕ್ ಮುಖಂಡರಾದ ಶ್ರೀ ಸ್ಟ್ಯಾನಿ ಡಿಸಿಲ್ವ ಮುಂತಾದವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಲಾಪ್ರಕಾರಗಳಾದ ಬ್ರಾಸ್ಬ್ಯಾಂಡ್, ಖಾರ್ವಿ ನೃತ್ಯ, ಗುಮಟ್, ಸಿದ್ದಿ ನೃತ್ಯ, ವಾದ್ಯ ವೃಂದ, ಕುಡುಬಿ ನೃತ್ಯ, ಕ್ರಿಸ್ಮಸ್ ಖೆಳ್, ಸಂಗೀತ ಕಲಾತಂಡಗಳು ವೈಭವಯುತವಾಗಿ ಪ್ರದರ್ಶನ ನೀಡಲಿರುವರು. ಕಾರ್ಯಕ್ರಮದ ಕೊನೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು.

