ಪುತ್ತೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಇವರು ಜಿ. ಎಸ್. ಟಿ. ಮಹಿಳಾ ಮಂಡಳಿ, ಪುತ್ತೂರು ಇವರ ಸಹಯೋಗದೊಂದಿಗೆ ಆಯೋಜಿಸುವ ಕೊಂಕಣಿ ರಂಗ ತರಂಗ ಮತ್ತು ಸಾಹಿತ್ಯ ಸಂಭ್ರಮ-3 ಕಾರ್ಯಕ್ರಮವು ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಅಪರಾಹ್ನ ಘಂಟೆ 3.00ಕ್ಕೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕ್ರತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಧರ್ಮದರ್ಶಿ ವ್ಯವಸ್ಥಾಪಕರಾದ ಡಾ. ಅಶೋಕ್ ಪ್ರಭು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ. ವೈ. ಉಮಾನಾಥ ಶೆಣೈ, ಗೌರವ ಅತಿಥಿಗಳಾಗಿ ಜಿ. ಎಸ್. ಬಿ. ಮಹಿಳಾ ಮಂಡಳಿಯ ಅಧ್ಯಕ್ಷ್ಯೆಯಾದ ಶ್ರೀಮತಿ ಎಮ್. ವಿದ್ಯಾ ಭಟ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಪುತ್ತೂರಿನ ಹಿರಿಯ ಸಾಹಿತಿಯಾದ ಶ್ರೀ ಉಲ್ಲಾಸ್ ಕೆ. ಪೈ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕೊಂಕಣಿಯ ಹಿರಿಯ ಸಂಗೀತಗಾರರಾದ ಶ್ರೀ ಪಾಂಡುರಂಗ ನಾಯಕ್ ಇವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಸಂಚಾಲಕರು ಹಾಗೂ ಕಲಾವಿದರಾದ ಶ್ರೀ ಕೃಷ್ಣಾನಂದ ನಾಯಕ್ ಸಂವಾದ ನಡೆಸಿಕೊಡಲಿದ್ದಾರೆ.
ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾಮಿ ವಿದ್ಯಾ ಶೆಣೈ ಮತ್ತು ತಂಡದವರಿಂದ ಭರತನಾಟ್ಯ, ವಿದುಷಿ ಮಾನಸ ಪೈ ಇವರಿಂದ ಶಾಸ್ತ್ರೀಯ ನೃತ್ಯ, ನಮಿತಾ ಪೈ ಮತ್ತು ತಂಡದವರಿಂದ ರಂಗಪಂಚಮಿ ಕೊಂಕಣಿ ನೃತ್ಯ ಹಾಗೂ ರಜನಿ ಪ್ರಭು ಮತ್ತು ಬಳಗದವರಿಂದ ಹಾಸ್ಯ ನಾಟಕ ‘ಪಾಟ್ಟೊ ನತ್ತಿಲ್ಲೆ ರೈಲ್’ ಪ್ರದರ್ಶನಗೊಳ್ಳಲಿದೆ.

