ಶಿರಸಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣ ಕಲಾ ಮಂಡಳ (ರಿ.) ಶಿರಸಿ ಇವರ ಸಹಯೋಗದಲ್ಲಿ ಶಿರಸಿಯ ರಂಗಧಾಮ, ನೆಮ್ಮದಿ ಆವರಣ ಸಭಾಂಗಣದಲ್ಲಿ ದಿನಾಂಕ 24 ಆಗಸ್ಟ್ 2025ರಂದು ಕೊಂಕಣಿ ಮಾನ್ಯತಾ ದಿನಾಚರಣೆ- 2025ನ್ನು ಆಚರಿಸಲಾಯಿತು. ವಂ. ಸ್ವಾಮಿ ಪೀಟರ್ ಪಿಂಟೊರವರು ಕೊಂಕಣಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, “ಕೊಂಕಣಿ ಭಾಷೆಗೆ ಮಾನ್ಯತೆ ದೊರೆತ ಬಗ್ಗೆ ಹಾಗೂ ಇದರ ಮಹತ್ವವನ್ನು ವಿವರಿಸಿ, ಭಾಷೆಗಳನ್ನು ಕಲಿಯುವುದರೊಂದಿಗೆ, ಕೊಂಕಣಿ ಭಾಷೆಯನ್ನು ಮರೆಯದೆ, ಕೊಂಕಣಿ ಮಾತಾನಾಡಬೇಕು. ಕೊಂಕಣಿ ಭಾಷೆಗೆ ಗೌರವ ನೀಡಬೇಕು” ಎಂದು ಕರೆಕೊಟ್ಟರು. ಅತಿಥಿ ಗಣ್ಯರನ್ನು ಸ್ವಾಗತಿಸಿ, ಭಾಷಣ ಹಾಗೂ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕಲಾತಂಡಗಳಿಗೆ ಶುಭಹಾರೈಸಿದರು.
ಶಿರಸಿಯ ಡಾನ್ ಬೊಸ್ಕೊ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಸ್ವಾ. ಪೀಟರ್ ಪಿಂಟೊರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲರೂ ಕೊಂಕಣಿ ಭಾಷೆಯನ್ನು ಮಾತಾನಾಡುವುದರೊಂದಿಗೆ ಕೊಂಕಣಿ ಭಾಷೆಯು ಬೆಳೆಯಲಿ ಎಂದು ಹೇಳಿ, ಕೊಂಕಣಿ ಕವನವನ್ನು ವಾಚಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ನಂತರ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಕೊಂಕಣಿ ಭಾಷಣ ಹಾಗೂ ಕೊಂಕಣಿ ಗೀತಗಾಯನ ಸ್ಪರ್ಧೆಗಳು ನಡೆದವು.
ಶ್ರೀ ವಾಸುದೇವ ಶಾನಭಾಗ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಕೊಂಕಣಿ ಕವಿಗಳಾದ ದಿಪಾಲಿ ಸಾಮಂತ, ನಾಗೇಶ ಅಣ್ವೇಕರ, ಶ್ರೀನಿವಾಸ ಶಾನಭಾಗ, ಕೃಷ್ಣ ಪದಕಿ, ರಾಜೇಂದ್ರ ಕುಮಾರ ಎಸ್. ಮಿರಾಂದಾ, ಅಜಿತ ಬಿಳಗಿ, ಉಮೇಶ ದೈವಜ – ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ರವಿ ಹೆಗಡೆ ಗಡಿಹಳ್ಳಿ ಶಿರಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ನೆರೆದವರನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕರವರು ಮಾತಾನಾಡಿ, “ದೇಶದ ಯಾವುದೇ ಮೂಲೆಗೆ ಹೋದರೂ ಕೊಂಕಣಿ ಮಾತಾನಾಡುವ ಜನರಿದ್ದಾರೆ. ಹಲವಾರು ಭಾಷೆಗಳ ನಡುವೆ ಕೊಂಕಣಿ ಭಾಷೆಯು ಭಾಂದವ್ಯದ ಭಾಷೆಯಾಗಿ ಮೆರೆಯುತ್ತಿದೆ. ಕೊಂಕಣಿ ಭಾಷೆಯು ಬೆಳೆಯಲಿ. ಸರಕಾರವು ಕೊಂಕಣಿಗರಿಗಾಗಿ ಹಲವು ಸವಲತ್ತುಗಳನ್ನು ನೀಡುತ್ತಿದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
ಗೌರವ ಅತಿಥಿಗಳಾಗಿದ್ದ ನಗರ ಸಭೆ ಶಿರಸಿಯ ಉಪಾಧ್ಯಕ್ಷರಾದ ಶ್ರೀ ರಮಾಕಾಂತ ಎಂ. ಭಟ್ಟರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೊಂಕಣಿ ಭಾಷಣ ಮತ್ತು ಕೊಂಕಣಿ ಗೀತಗಾಯನ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಪ್ರಣಮ್ಯ ಹರೀಶ ಭಟ್ಟ- ಪ್ರಥಮ ಸ್ಥಾನ, ರೀತು ಕಿರಣ್ ಶೇಟ್ – ದ್ವಿತೀಯ ಸ್ಥಾನ, ರಿತು ವಿ. ಕರ್ಕಿ – ತೃತೀಯ ಸ್ಥಾನವನ್ನು ಪಡೆದರು. ಕೊಂಕಣಿ ಗೀತಗಾಯನ ಸ್ಪರ್ಧೆಯಲ್ಲಿ ಪ್ರಿಸ್ಟನ್ ಡಾಯಸ್ ಹಾಗೂ ಮೆಲ್ವಿತಾ – ಪ್ರಥಮ ಸ್ಥಾನ, ಸೌಜನ್ಯ ಅನುತಿ ಸಿದ್ದಿ- ದ್ವಿತೀಯ ಸ್ಥಾನ ಹಾಗೂ ಗಿರಿಧರ ಗೋಕುಲದಾಸ – ತೃತೀಯ ಸ್ಥಾನವನ್ನು ಪಡೆದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ನವೀನ್ ಲೋಬೊರವರು ಉಪಸ್ಥಿತರಿದ್ದರು. ಸ್ಥಳೀಯ ಸಂಚಾಲಕರಾದ ಶ್ರೀ ರಾಮ ಕಿಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ಯಕ್ಷಗಾನ ತಾಳಮದ್ದಲೆ, ಲೋಕವೇದ ವೈಭವ, ಕಲಾ ವೈವಿಧ್ಯ, ವಿನೋದಾವಳಿ ಕಾರ್ಯಕ್ರಮಗಳು ಜರುಗಿದವು.