14 ಮಾರ್ಚ್ 2023 ಮಂಗಳೂರು: ಕರಾವಳಿ ಮೂಲದ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ 09.03.2023ರಂದು ಆಯ್ಕೆಯಾಗಿದ್ದಾರೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಐದು ವರ್ಷಗಳವರೆಗೆ ಇವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕೊಂಕಣಿ ಸಲಹಾ ಮಂಡಳಿಯ ನೇತೃತ್ವ ವಹಿಸಲು ಗೋವಾ ರಾಜ್ಯದ ಹೊರಗಿನವರೊಬ್ಬರು ಆಯ್ಕೆಯಾಗಿರುವುದು ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಇದೇ ಮೊದಲು. ಕರ್ನಾಟಕ ರಾಜ್ಯಕ್ಕೆ ಈ ಮನ್ನಣೆ ಪ್ರಾಪ್ತವಾಗಿದೆ. ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಚುನಾವಣೆಯಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹರಿಯಾಣದ ಮಾಧವ ಕೌಶಿಕ್ ಮತ್ತು ಉಪಾಧ್ಯಕ್ಷರಾಗಿ ಹೊಸದಿಲ್ಲಿಯ ಕುಸುಮ ಶರ್ಮ ಆಯ್ಕೆಯಾಗಿದ್ದಾರೆ.
ಕವಿತಾ ಟ್ರಸ್ಟ್ ನ ಸ್ಥಾಪಕರಾಗಿರುವ ಇವರು ಕೊಂಕಣಿ ಕಾವ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಆರು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಮೂರು ಭಾಷಾಂತರಗೊಂಡ ಕೃತಿಗಳು, ಆರು ಸಂಪಾದಿತ ಕೃತಿಗಳು, ಒಂದು ನೀಳ್ಗತೆ ಸೇರಿ ಸುಮಾರು 34 ಕೃತಿಗಳನ್ನು ಪ್ರಕಟಿಸಿದ್ದಾರೆ ಕೊಂಕಣಿ ಕಾವ್ಯಕ್ಕೆ ಸಂಬಂಧಿಸಿದಂತೆ ಸುಮಾರು 220 ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕೊಂಕಣಿ ಹಾಡುಗಳ ಧ್ವನಿ ಸುರುಳಿಗಳೂ ಬಿಡುಗಡೆಗೊಂಡಿವೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ಮಣಿಪಾಲದ ಟಿ.ಎಂ.ಎ.ಪೈ ಪುಸ್ತಕ ಪುರಸ್ಕಾರಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ. 2019ರಲ್ಲಿ ಗೋವಾದ ಕಾಣಕೋಣದಲ್ಲಿ ನಡೆದ 24ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ ಖ್ಯಾತಿ ಇವರದ್ದು. ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಕೇಂದ್ರದ ವಿಶ್ವಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ದೈಜಿವರ್ಲ್ಡ್ ಸಂಸ್ಥೆಯ ನಿರ್ದೇಶಕರಾಗಿರುವ ಮೆಲ್ವಿನ್ ರೊಡ್ರಿಗಸ್ ಉದ್ಯಮ ನಿರ್ವಹಣೆಯಲ್ಲಿ ಸ್ನಾತಕ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವವೀಧರರಾಗಿದ್ದಾರೆ.