ನಾಪೋಕ್ಲು : ಕೊಡಗು ಜಿಲ್ಲೆಯ ಯವಕಪಾಡಿ ನಿವಾಸಿ ಆದಿವಾಸಿ ಹೋರಾಟಗಾರ ಕುಡಿಯರ ಮುತ್ತಪ್ಪ ಅವರಿಗೆ ದಿನಾಂಕ 28-12-2023ರಂದು ರಾಜ್ಯಮಟ್ಟದ ‘ಕೊರವಂಜಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಡ್ಯ ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕೊರವಂಜಿ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ಜಿಲ್ಲಾ ಕುಳುವ ಸಮಾಜದ ಅಧ್ಯಕ್ಷ ಕೃಷ್ಣ ಕುಮಾರು ಗಂಗೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಂಬಾಣಿ, ಶ್ರೀರಂಗ ಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ, ಸಾಂಸ್ಕೃತಿಕ ಚಿಂತಕರಾದ ಜಿ.ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕುಡಿಯರ ಮುತ್ತಪ್ಪ ಕುಡಿಯ ಜನಾಂಗಕ್ಕೆ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದರು. ಕೊಡಗು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರೀಡೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇವರ ಸೇವೆಯನ್ನು ಪರಿಗಣಿಸಿ ವಿವೇಕಾನಂದ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗ್ರಾ.ಪಂ ವತಿಯಿಂದ ಉತ್ತಮ ಸಮಾಜ ಸೇವಕ ಪ್ರಶಸ್ತಿ ಮೂರು ಬಾರಿ ಲಭಿಸಿದೆ. 2020-21ರ ಸಾಲಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಉತ್ತಮ ಜಾನಪದ ಕಲಾವಿದ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಮಡಿಕೇರಿ ತಾಲೂಕಿನ ಕಕ್ಕಬೆ ಕುಂಜಿಲ ಗ್ರಾ.ಪಂ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ವಾಸವಾಗಿದ್ದಾರೆ.

 
									 
					