ಬೆಂಗಳೂರು : ಕಲಾವಿಲಾಸಿ ತಂಡದ ಕಲಾವಿದರಿಂದ ‘ಕ್ರಾಂತಿ ಬಂತು # ಕ್ರಾಂತಿ’ ಎಂಬ ನಾಟಕ ದಿನಾಂಕ 17 ನವೆಂಬರ್ 2024, ರವಿವಾರದಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ. ಸಿ ಅಶ್ವತ್ ಕಲಾಭವನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 100 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಬಹುದು.
‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ. ಸಮಾಜವಾದ, ಸಮತಾವಾದ, ಕ್ರಾಂತಿಯಂತಹ ವಿಚಾರಗಳ ಘರ್ಷಣೆ ಉತ್ತುಂಗದಲ್ಲಿದ್ದಾಗ ಬರೆಯಲ್ಪಟ್ಟಿರುವ ನಾಟಕ ಇಂದಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಕೂಡ ಸಮರ್ಥವಾಗಿ ಪ್ರತಿಧ್ವನಿಸುತ್ತದೆ. ಮೂಲ ಪಠ್ಯದ ವಿಸ್ತರಣೆಯನ್ನು ಕಲಾವಿಲಾಸಿ ತಂಡದ ಕಲಾವಿದರು ಈಗಿನ ಕಾಲದ ಸಂಕೀರ್ಣ ಮತ್ತು ಸೂಕ್ಷ್ಮ ಘಟನೆಗಳನ್ನು ಇಟ್ಟುಕೊಂಡು ಇಂದಿನ ತಲೆಮಾರಿಗೆ ಹತ್ತಿರವಾಗುವ ಹಾಗೆ ವಿಸ್ತರಿಸಿದ್ದಾರೆ.
ಬಂಡವಾಳ ಶಾಹಿಗಳ ದೋರಣೆ, ವ್ಯವಸ್ಥೆಯ ಹಸ್ತಕ್ಷೇಪ, ತಮ್ಮ ಲಾಭಕ್ಕಾಗಿ ಅಮಾಯಕರ ದಿಕ್ಕು ತಪ್ಪಿಸುವ ಪ್ರಭಾವಿಗಳ ಅವಕಾಶವಾದಿ ಧೋರಣೆ, ಕ್ಷಮತೆ ಕಳೆದುಕೊಳ್ಳುವ ಯುವಕರ ಆಕ್ರೋಶ, ಸಾಮಾಜಿಕ ಜಾಲತಾಣಗಳ ಸಾಮೂಹಿಕ ಅಭಿಪ್ರಾಯಗಳು ಮತ್ತು ಇವೆಲ್ಲವನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವ ವೇಗದ ಮಾಧ್ಯಮಗಳು… ಹೀಗೆ ನಾಟಕವು ಹಲವು ಜ್ವಲಂತ ಸಮಸ್ಯೆಗಳಿಗೆ ಪ್ರೇಕ್ಷಕರನ್ನು ಮುಖಾಮುಖಿಗೊಳಿಸುತ್ತಾ ಹೋಗುತ್ತದೆ. ಸರಿ ತಪ್ಪುಗಳು ಅವರವರ ವಿವೇಚನೆಗೆ ಬಿಟ್ಟಿದ್ದು. ನಾಟಕದುದ್ದಕ್ಕೂ ತಮಗೆ ಸರಿ ಎನಿಸುವ ನಿರ್ಧಾರಗಳನ್ನು ತಗೆದುಕೊಂಡು ತಮ್ಮ ದಾರಿಗಳನ್ನು ಆರಿಸಿಕೊಳ್ಳುವ ಪಾತ್ರಗಳು ಈ ಸಂಕೀರ್ಣ ವ್ಯವಸ್ಥೆಯ ಸುಳಿಯಲ್ಲಿ ಸಿಕ್ಕಿಕೊಂಡು ಕುತೂಹಲವನ್ನು ಕೆರಳಿಸುತ್ತವೆ. ಹಾಸ್ಯ ಮಿಶ್ರಿತ ವಿಡಂಭನೆಯೊಂದಿಗೆ ಕಟ್ಟಿರುವ ನಾಟಕ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನೂ ಒದಗಿಸುತ್ತದೆ.