ಇವರು ಕೃಪಾ ದೇವರಾಜ್, ಕೊಡಗಿನ ತಿತಿಮತಿಯ ಮೂಡಗದ್ದೆ ಶ್ರೀ ಈರಪ್ಪ ಹಾಗೂ ಶ್ರೀಮತಿ ಅನಸೂಯಾ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ತಿತಿಮತಿಯಲ್ಲಿ ಮುಗಿಸಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನೂ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಕಾಂ. ಪದವಿಯನ್ನು ಪಡೆದಿರುತ್ತಾರೆ. ಮುಂದೆ ಪೋಸ್ಟ್ ಗ್ರಾಜ್ಯೇಷನ್ ಡಿಪ್ಲೋಮಾ ಇನ್ ಹ್ಯೂಮನ್ ರಿಸೋರ್ಸ್ ಹಾಗೂ ಮ್ಯಾನೇಜ್ಮೆಂಟ್ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್ಟೆನ್‌ಷನ್ ಸರ್ವೀಸಸ್ ಫಾರ್ ಇನ್ ಪುಟ್ ಡೀಲರ್ಸ್‌ನಲ್ಲಿ ಕೊಡಗಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಪ್ರಸ್ತುತ ಟಾಟಾ ಕಾಫಿ ಕಂಪನಿ ಮಡಿಕೇರಿಯ ತೋಟಗಾರಿಕಾ ವಿತರಣಾ ವಿಭಾಗದಲ್ಲಿ ಬ್ರಾಂಚ್ ಇನ್ ಚಾರ್ಜ್ ಆಗಿರುವ ಇವರು ನಿರೂಪಣೆ, ಚಾರಣ, ಫೋಟೋಗ್ರಫಿ, ಪ್ರಕೃತಿ ನಡಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇವರು ತಮ್ಮ 9ನೆಯ ತರಗತಿಯಲ್ಲಿ ಓದುತ್ತಿದ್ದಾಗ ಶಕ್ತಿ ದಿನಪತ್ರಿಕೆಯಲ್ಲಿ ಇವರ ಮಕ್ಕಳ ಕಥೆ ಪ್ರಕಟವಾಗಿತ್ತು.
ಬಳಿಕ ಸುಧಾ, ಮಂಗಳ, ವಿಜಯ ಕರ್ನಾಟಕ ಇನ್ನಿತರ ಪತ್ರಿಕೆಗಳಲ್ಲಿ ಕಥೆ ಕವನ ಪ್ರಕಟವಾಗಿವೆ. ದ್ವಿತೀಯ ಬಿ.ಕಾಂ.ನಲ್ಲಿ ಓದುದ್ದಾಗ, ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ. ರಾಜ್ಯ ಮಟ್ಟದ ವಿವಿಧ ಕವಿಗೋಷ್ಠಿ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಜೊತೆಗೆ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು ಆಯೋಜಿಸುವ ಕವಿಗೋಷ್ಠಿಗಳು ಹಾಗೂ ಕೊಡಗಿನ ದಸರಾ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಕೇರಳದ ಕಾಲಡಿಯ ಶಂಕರಾಚಾರ್ಯ ವಿಶ್ವವಿದ್ಯಾನಿಲಯ ಆಗಸ್ಟ್ 2020ರಲ್ಲಿ ಭಾರತದ ವಿವಿಧ ಭಾಷೆಗಳಲ್ಲಿ ಹೊರತಂದಿರುವ ಕವನಸಂಕಲನದಲ್ಲಿ ಇವರ 12 ಅರೆಭಾಷೆ ಕವನಗಳು ಆಯ್ಕೆ ಪ್ರಕಟವಾಗಿರುತ್ತವೆ. ಇವರು ಸಾರಸ್ವತ ಲೋಕಕ್ಕೆ ‘ಭಾವದ ಕದ ತಟ್ಟಿ’ (ಕವನ ಸಂಕಲನ), ‘ಮರ್ಮರ’ (ಕಥಾ ಸಂಕಲನ), ‘ಕಾರ್ಪಣ್ಯದ ಹೂವು’ (ಕವನ ಸಂಕಲನ) ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಭಾಷಣ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ಅಂತರ ಕಾಲೇಜು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲೂ ಪ್ರಥಮ ಬಹುಮಾನಗಳನ್ನು ಪಡೆದಿದ್ದಾರೆ.
ಕೊಡಗು ಜಾನಪದ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಜಾನಪದ ಕತೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಶಕ್ತಿ ಪತ್ರಿಕೆಯ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಮತ್ತು 54 ಸಾವಿರ ಬರಹಗಾರರಿರುವ ರಾಜ್ಯಮಟ್ಟದ ಕಥಾಗುಚ್ಚ ಎಂಬ ಅಂತರ್ಜಾಲದ ಗುಂಪಿನಲ್ಲಿ ಅಪೂರ್ಣ ಕತೆ ಪೂರ್ಣಗೊಳಿಸುವ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಖಿಲಾ ಭಾರತೀಯ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ಆಯೋಜಿಸಿದ್ದ ಕವನ ಸ್ಪರ್ಧೆಗೆ ತೀರ್ಪುಗಾರಳಾಗಿಯೂ ಸ್ಥಳೀಯ ಚಾನೆಲ್ ಕೂರ್ಗ್ ಮತ್ತು ಕೊಡಗು ಚಾನೆಲಲಾನಲ್ಲಿ ವಾರ್ತಾ ವಾಚಕಳಾಗಿರುವ ಜೊತೆಗೆ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಪತಿ ಪೂಜಾರಿರ ದೇವರಾಜ್ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಮಡಿಕೇರಿಯಲ್ಲಿ ವಾಸವಿರುವ ಇವರ ಮುಂದಿನ ಬರಹ ಬದುಕು ಬೆಳಗಲೆಂದು ಹಾರೈಸೋಣ ಬನ್ನಿ.
ವೈಲೇಶ್ ಪಿ.ಎಸ್. ಕೊಡಗು
8861405738