ಧಾರವಾಡ : ಭಾರತೀಯ ಸಂಗೀತ ವಿದ್ಯಾಲಯ, ದಾಸಾ ಟ್ರಸ್ಟ್ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ದಿನಾಂಕ 02-06-2024ರಂದು ಸೃಜನಾ ರಂಗಮಂದಿರದಲ್ಲಿ ನಡೆದ ‘ಮ್ಯೂಜಿಕ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಖ್ಯಾತ ಸಾರಂಗಿ ವಾದಕ ಉಸ್ತಾದ್ ಫಯಾಜ್ ಖಾನ್ ಅವರಿಗೆ ‘ವಿದುಷಿ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ “ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ ಕಲಿಸಲು ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯ. ಮಕ್ಕಳಿಗೆ ಸಂಗೀತ ಕಲಿಸುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ವಿಜ್ಞಾನ, ಗಣಿತದೊಂದಿಗೆ ಮಕ್ಕಳು ಸಂಗೀತವನ್ನೂ ಕಲಿಯುವುದು ಅವಶ್ಯಕ ಎಂಬುದನ್ನು ಶಿಕ್ಷಕರು ಹಾಗೂ ಪಾಲಕರು ಅರಿಯುವುದು ಅವಶ್ಯ. ಮಾನಸಿಕ ನೆಮ್ಮದಿ ಪಡೆಯಲು ಸಂಗೀತ ಸಹಾಯಕಾರಿದೆ. ‘ವಿದುಷಿ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ’ ಶ್ರೇಷ್ಠ ಗಾಯಕ ಹಾಗೂ ಸಾರಂಗಿ ವಾದಕ ಫಯಾಜ್ ಖಾನ್ ಅವರಿಗೆ ಲಭಿಸಿರುವುದು ಖುಷಿ ನೀಡಿದೆ” ಎಂದು ಹೇಳಿದರು.
ವೇದಿಕೆ ಮೇಲೆ ವಿನಯ ನಾಯಕ್, ಡಾ. ಸೌಭಾಗ್ಯ ಕುಲಕರ್ಣಿ ಉಪಸ್ಥಿತರಿದ್ದರು. ಮಾಯಾ ರಾಮನ್ ನಿರೂಪಿಸಿದರು. ‘ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ’ಯು ರೂ.25,000/- ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಧ್ರುವ ಅಜಯ್ ಹಾನಗಲ್ ಇವರಿಂದ ಕೊಳಲು ವಾದನ ಮತ್ತು ಉಸ್ತಾದ್ ಫೈಯಾಜ್ ಖಾನ್ ಇವರಿಂದ ಹಾಡುಗಾರಿಕೆ ಪ್ರಸ್ತುತಗೊಂಡಿತು. ಪಂಡಿತ್ ಭರತ್ ಕಾಮತ್ ಮತ್ತು ಡಾ. ಉದಯ್ ಕುಲಕರ್ಣಿ ಇವರು ತಬ್ಲಾದಲ್ಲಿ ಮತ್ತು ಶ್ರೀ ಸರ್ಫರಾಜ್ ಖಾನ್ ಇವರು ಸಾರಂಗಿಯಲ್ಲಿ ಸಹಕರಿಸಿದರು.