ಉಡುಪಿ : ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ಕೊಡಲ್ಪಡುವ ಐದನೇ ವರುಷದ ‘ಕೃಷ್ಣಪ್ರೇಮ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 19-11-2023 ಆದಿತ್ಯವಾರದಂದು ಸಂಜೆ 5-30ರಿಂದ ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತ್ಯ ವಿಮರ್ಶಕರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿಕೊಳ್ಳಲಿದ್ದಾರೆ. ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಾಧು ಸಾಲ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿಯ ಹಿರಿಯ ಉದ್ಯಮಿಗಳಾದ ಶ್ರೀ ವಿಶ್ವನಾಥ್ ಶೆಣೈಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಬಾರಿಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ನೃತ್ಯ ಸಾಹಿತ್ಯ ಕ್ಷೇತ್ರದ ಸಾಧಕಿ ವಿದುಷಿ ಬಿ.ಸುಮಂಗಲಾ ರತ್ನಾಕರ್ ಮಂಗಳೂರು, ನೃತ್ಯವಾದ್ಯ ಸಂಗೀತ ಕ್ಷೇತ್ರದ ಸಾಧಕರಾದ ಶ್ರೀ ಬಾಲಚಂದ್ರ ಭಾಗವತ್ ಉಡುಪಿ, ನೃತ್ಯವರ್ಣಾಲಂಕಾರ ಕ್ಷೇತ್ರದ ಸಾಧಕ ಶ್ರೀ ರಮೇಶ್ ಕೆ. ಪಣಿಯಾಡಿ, ನಾಟಕ, ಸಂಗೀತ ಮತ್ತು ನಿರ್ದೇಶನದ ಸಾಧಕ ಶ್ರೀ ಗುರುರಾಜ್ ಮಾರ್ಪಳ್ಳಿ, ನಾಟಕದ ನಟನಾ ಕ್ಷೇತ್ರದ ಶ್ರೀ ಗೋವಿಂದ ಐತಾಳ್ ಕೊಡವೂರು ಮತ್ತು ಶ್ರೀ ಕಾಳು ಶೇರಿಗಾರ್ ಕೊಡವೂರು ಇವರಿಗೆ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಡಾ. ಶ್ರೀ ಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದ ಹಾಗೂ ಮೇಘಸಮೀರ ಮತ್ತು ದಿಶಾ ರಮೇಶ್ ಅಭಿನಯದ ‘ಕಣಿವೆಯ ಹಾಡು’ ನಾಟಕ ಪ್ರದೇಶನಗೊಳ್ಳಲಿದೆ. ನೃತ್ಯನಿಕೇತನ ಕೊಡವೂರು ಇದರ ನಿರ್ದೇಶಕರುಗಳಾದ ವಿದ್ವಾನ್ ಸುಧೀರ್ ರಾವ್ ಮತ್ತು ವಿದುಷಿ ಮಾನಸಿ ಸುಧೀರ್ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.