ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತಪಡಿಸಿದ ನಿತ್ಯಾಂತರಂಗ 137ನೇ ಸರಣಿ ಕಾರ್ಯಕ್ರಮವು 21.11.2025 ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಕರಾವಳಿಯ ಪ್ರತಿಭಾವಂತ ಕಲಾವಿದರಾದ ಶ್ರೀಮತಿ ರಾಧಿಕಾ ಶೆಟ್ಟಿ, ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ದೀಪಕ್, ವಿದುಷಿ ಅನ್ನಪೂರ್ಣ ರಿತೇಶ್, ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಈ ಐದು ಮಂದಿ ಸೇರಿ ಮಾಡಿದ “ಕೃಷ್ಣಾನಂದ ಲಹರಿ” ಸರಣಿ ಕಾರ್ಯಕ್ರಮವು ಜನ ಮೆಚ್ಚುಗೆಯನ್ನು ಪಡೆಯಿತು.
ಮಾನವ ಸಂಕುಲ ಗೋವುಗಳ ಹಾಗೆ.’ದೈವಿಕ ಗೋಪಾಲ’ನ ಮಾರ್ಗದರ್ಶನದಲ್ಲಿ ಗೋವುಗಳು ನಡೆಯುವಂತೆ, ಅದೇ ಗೋಪಾಲಕೃಷ್ಣನ ಆಣತಿಯಂತೆ ನಾವೂ ನಡೆಯುವುದು ಎಂಬ ವಿಚಾರವನ್ನು “ದೈವಿಕ ಗೋಪಾಲ” ಎಂಬ ನೃತ್ಯದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿದವರು ವಿದುಷಿ ಅನ್ನಪೂರ್ಣಾ ರಿತೇಶ್.

ಕಲಾದೀಪ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರು ಯಶೋದೆ ಕೃಷ್ಣರ ನಡುವಿನ ವಾತ್ಸಲ್ಯಭರಿತ ಸಂಬಂಧವನ್ನು “ಮೈಯ್ಯಾ ಮೊರೆ ಮೈ ನಹಿ ಮಾಖನ್ ಖಾಯೋ ” ಎಂಬ ಕೃಷ್ಣ ಭಜನೆಗೆ ತಾಯಿ ಮಗನಾಗಿ ಅದ್ಭುತ ಪ್ರದರ್ಶನ ನೀಡಿದರು. ಈ ನೃತ್ಯದಲ್ಲಿ ನವಿರಾದ ಹಾಸ್ಯ, ಕೃಷ್ಣನ ತುಂಟತನ, ಯಶೋದೆಯ ವಾತ್ಸಲ್ಯ ಭರಿತ ಪ್ರೇಮ ಕಾಣಬಹುದು.

ಅನ್ಯ ಗೋಪಿಕೆಯೊಂದಿಗೆ ಸೇರಿ ಮನೆಗೆ ಬಂದ ಕೃಷ್ಣನಲ್ಲಿ ಕೆಲವು ಕುರುಹುಗಳನ್ನು ಕಂಡ ರಾಧೆಯ ಮನಸು ಮುರಿದು ಹೋಗಿ ಖಂಡಿತ ನಾಯಿಕೆಯಾಗಿ, ಕೃಷ್ಣನ ತಪ್ಪುಗಳನ್ನೆಲ್ಲ ಖಂಡಿಸಿ, ಆಂತರ್ಯದಲ್ಲಿ ಪ್ರೀತಿ ಇದ್ದರೂ ತೋರಗೊಡದೆ, ದುಃಖವನ್ನು ಅದುಮಿಟ್ಟು, ಖಂಡಿಸಿ ಕೃಷ್ಣನನ್ನು ಹಿಂದಕ್ಕೆ ಕಳುಹಿಸುತ್ತಾಳೆ. ಈ ನೃತ್ಯದಲ್ಲಿ ಶ್ರೀಮತಿ ರಾಧಿಕಾ ಶೆಟ್ಟಿ ಅವರು ಪಾತ್ರದೊಳಹೊಕ್ಕು ಮಾಡಿದ ಭಾವಾಭಿನಯ ಅನನ್ಯವಾಗಿತ್ತು.

ಸಾವಿರ ಎದೆಗಳುಳ್ಳ ದುಷ್ಟ ಕಾಳಿಂಗನ ಮೇಲೆ ಕೃಷ್ಣ ನರ್ತಿಸಿದಾಗ ಉಗ್ರನಾದ ಕಾಳಿಂಗ ತೋರಿದ ಪರಾಕ್ರಮವನ್ನು ಕೃಷ್ಣ ಲೀಲಾಜಾಲವಾಗಿ ಆ ಎಲ್ಲಾ ಹೆಡೆಗಳನ್ನೂ ಮೆಟ್ಟಿ, ಕಾಳಿಂಗನನ್ನು ಮರ್ದಿಸಿದ ಚಿತ್ರಣವನ್ನು ನೃತ್ಯದ ಮೂಲಕ ಲವಲವಿಕೆಯಿಂದ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದವರು ವಿದುಷಿ ಮಂಜರಿ ಚಂದ್ರ ಪುಷ್ಪರಾಜ್.

ಕೊನೆಯಲ್ಲಿ ಎಲ್ಲರೂ ಸೇರಿ ಮಂಗಳ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.
ಒಟ್ಟಿನಲ್ಲಿ ಕೃಷ್ಣಾನಂದಲಹರಿ ಒಂದು ಯಶಸ್ವೀ ಪ್ರಯೋಗವಾಯಿತು.
ಶಂಖನಾದ, ಪ್ರಾರ್ಥನೆ ಮತ್ತು ಪಂಚಾಂಗಪಟಣದ ಮೂಲಕ ಆರಂಭಗೊಂಡ ನೃತ್ಯಾಂತರಂಗದ 137ನೇ ಸರಣಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಮಂಗಳೂರಿನ roovari.com ಪತ್ರಿಕೆಯ ಪ್ರಧಾನ ಸಂಪಾದಕಿಯಾದ ಶ್ರೀಮತಿ ರತ್ನಾವತಿ ಜೆ ಬೈಕಾಡಿ ಉದ್ಘಾಟಿಸಿದರು. ಕಲಾಸಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು “ಈ ಶಾಲೆ ಬರೇ ನೃತ್ಯ ಶಾಲೆ ಯಾಗಿರದೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ – ಸಂಸ್ಕೃತಿಯನ್ನು ತುಂಬುವ ಜೀವನ ಪಾಠಶಾಲೆಯಾಗಿದೆ. ನೃತ್ಯಾಭ್ಯಾಸದೊಂದಿಗೆ ಸಂಸ್ಕಾರವನ್ನು ನೀಡಿ ಸಂಸ್ಕೃತಿಯನ್ನು ತಿಳಿಸಿ ಕೊಡುವ ವ್ಯವಸ್ಥೆ ಶ್ಲಾಘನೀಯ.” ಎನ್ನುತ್ತಾ ಕಾರ್ಯಕ್ರಮದ ಒಟ್ಟು ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.

