ಕೋಟ : ದಿಮ್ಸಾಲ್ ಹಾಗೂ ಧಮನಿ ಉಭಯ ಸಂಸ್ಥೆಗಳ ಸಹಯೋಗದೊಂದಿಗೆ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸರಣಿ ಕಾರ್ಯಕ್ರಮ ‘ಸಿನ್ಸ್ 1999 ಶ್ವೇತಯಾನ’ದ ಅಂಗವಾಗಿ ಚಿಣ್ಣರ ತಾಳಮದ್ದಳೆ ‘ಕೃಷ್ಣಾರ್ಜುನರ ಕಾಳಗ’ವು ದಿನಾಂಕ 09-03-2024 ರಂದು ಕೋಟದ ಕಾವೇರಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಕೋಟದ ಕಾವೇರಿ ಕಾಂಪ್ಲೆಕ್ಸ್ ಇದರ ಮಾಲಕರಾದ ಸಂತೋಷ್ ಇವರನ್ನು ಅಭಿನಂದಿಸಿ ಮಾತನಾಡಿದ ಲಂಬೋದರ ಹೆಗಡೆ ನಿಟ್ಟೂರು “ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಂಸ್ಕೃತಿಯನ್ನು ವೃದ್ಧಿಸುತ್ತವೆ. ಮಹಾಭಾರತ ರಾಮಾಯಣದಲ್ಲಿನ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಬಾಲ್ಯವು ಪ್ರಮುಖ ಪಾತ್ರವಹಿಸುತ್ತದೆ. ಬಾಲ್ಯದಲ್ಲಿ ಸಾಂಸ್ಕೃತಿಕ ಶಿಕ್ಷಣ ಮೊದಲಾಗಬೇಕು. ಆಗಲೇ ಸಂಸ್ಕೃತಿ ಜೀವನದುದ್ದಕ್ಕೂ ಬೆಳೆಯುತ್ತದೆ ಮತ್ತು ಉಳಿಯುತ್ತದೆ. ಇಂತಹ ಮಕ್ಕಳನ್ನು ಪ್ರಭಾವೀಗೊಳಿಸುವ ಸಂಸ್ಥೆಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಿದರೆ ಮಕ್ಕಳ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸಂತೋಷ್ ಅಭಿನಂದನಾರ್ಹರು.” ಎಂದು ಹೇಳಿದರು.
ಯಕ್ಷ ಗುರು ಕೃಷ್ಣಮೂರ್ತಿ ಉರಾಳ, ಶ್ವೇತಯಾನದ ಉಪಾಧ್ಯಕ್ಷರಾದ ಗಣಪತಿ ಟಿ. ಶ್ರೀಯಾನ್, ಕೊಮೆ ಶನೇಶ್ವರ ದೇಗುಲದ ಅಧ್ಯಕ್ಷರಾದ ಗಣೇಶ್ ಅಮೀನ್ ಕೊಮೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ಯಶಸ್ವೀ ಕಲಾವೃಂದದ ಚಿಣ್ಣರಿಂದ ತಾಳಮದ್ದಳೆ ಪ್ರದರ್ಶನಗೊಂಡಿತು.