ಮೈಸೂರು : ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧರಿಸಿದ ‘ಕೃಷ್ಣೇಗೌಡರ ಆನೆ’ ನಾಟಕವು ಶ್ರೀ ಮಂಡ್ಯ ರಮೇಶರವರು ನಿರ್ದೇಶಿಸಿದ್ದು, ನಾಟಕದ ರಂಗರೂಪ ಶ್ರೀ ಶಶಿಕಾಂತ ಯಡಹಳ್ಳಿ ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರದ್ದು. ಈಗಾಗಲೇ ಮೈಸೂರು, ನೋಯಿಡಾ, ದೆಹಲಿಯಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ದಿನಾಂಕ 19-11-2023ರಂದು ಮೈಸೂರಿನ ನಟನಾ ರಂಗಮಂದಿರದಲ್ಲಿ, 21-11-2023ರಂದು ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ, ದಿನಾಂಕ 25-11-2023ರಂದು ಹುಬ್ಬಳ್ಳಿಯ ವಿದ್ಯಾನಗರ ಮತ್ತು ದಿನಾಂಕ 07-12-2023ರಂದು ವಿಜಯಪುರದಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು ಶ್ಲಾಘನೀಯ. ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು ಹಾಗೂ ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ಇದು ವಿಸ್ತರಿಸಿಕೊಂಡಿದೆ.
ನಟನ ರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ ಆಧುನಿಕ ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಕರ್ನಾಟಕದ ಹಳ್ಳಿ ಹಳ್ಳಿಗೂ ನಾಟಕ ತಲುಪುವಂತೆ ಮಾಡಿ, ಮೂಲೆ ಮೂಲೆಯಲ್ಲಿಯೂ ರಂಗ ಚಟುವಟಿಕೆಗಳು ಚಿಗುರುವಂತಾಗಲು ಮೂಲ ಕಾರಣರಾದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ ಹಾಗೂ ನೀನಾಸಂನ ನಿರ್ಮಾತೃ ಶ್ರೀ ಕೆ.ವಿ. ಸುಬ್ಬಣ್ಣ ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.