ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ದಿನಾಂಕ : 27-06-2023ರಂದು ನಡೆದ ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಶ್ರೀ ಕೆ.ಆರ್. ಪ್ರಸಿನ್ ಗೌಡ ರಚಿತ ಚೊಚ್ಚಲ ಕೃತಿ ‘ಮನ ಮಾತದಾಗ’ ಬಿಡುಗಡೆ ಸಮಾರಂಭ ಜರಗಿತು.
ಈ ಸಮಾರಂಭವನ್ನು ಉದ್ಘಾಟಿಸಿದ ಮಕ್ಕಳ ತಜ್ಞ ವೈದ್ಯ ಡಾ.ಬಿ.ಸಿ.ನವೀನ್ ಕುಮಾರ್ ಅವರು ಮಾತನಾಡಿ “ಪುಸ್ತಕಗಳು ಸಂವಹನ ಶೀಲತೆ, ಸಾಮಾಜಿಕ ಕಳಕಳಿ, ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಬುದ್ದಿಯ ಮಟ್ಟವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಪುಸ್ತಕಗಳ ಮಹತ್ವದ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡರೂ ಅಲ್ಲಿ ನಮ್ಮದೇ ಆದ ಹೆಜ್ಜೆಯನ್ನು ಮೂಡಿಸುವಂತಾಗಬೇಕು ಎಂಬುದು ಮಕ್ಕಳಿಗೆ ಮಾತ್ರವಲ್ಲ ಸಮಾಜಕ್ಕೂ ತಿಳುವಳಿಕೆ ಮೂಡಲು ಪುಸ್ತಕಗಳು ಹೆಚ್ಚು ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಸಮಾಜಕ್ಕಾಗಿ ತ್ಯಾಗ ಮಾಡಿದವರನ್ನು ಸದಾ ನೆನಪಿಸುವುದು ಪುಸ್ತಕಗಳು, ಹೊರ ಜಗತ್ತಿಗೆ ಸ್ನೇಹಿತನಂತಿರುವ ಪುಸ್ತಕಗಳೇ ಕಿಟಕಿಗಳು. ಆದ್ದರಿಂದ ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರೊಂದಿಗೆ, ಪ್ರತೀ ಮನೆಯಲ್ಲಿ ಪುಸ್ತಕಗಳನ್ನು ಕೊಂಡು ಓದಿ ಸಂಗ್ರಹಿಸುವುದು, ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಓದುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು ನಾಗರೀಕ ಸಮಾಜದ ಜವಾಬ್ದಾರಿಯಾಗಬೇಕು” ಎಂದು ನವೀನ್ ಕುಮಾರ್ ಸಲಹೆ ನೀಡಿದರು.
ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, “ಪ್ರಾಚೀನ ಶಿಕ್ಷಣದಲ್ಲಿ ಮಗುವಿಗೆ ಭಾವಕೋಶ ಹಾಗೂ ಬುದ್ದಿ ಕೋಶವನ್ನು ಬೆಳೆಸುವಂತಹ ಶಿಕ್ಷಣವಿತ್ತು. ಆದರೆ ಇಂದು ಬುದ್ದಿ ಕೋಶವನ್ನು ಮಾತ್ರ ವಿಕಸನಗೊಳಿಸಿ ಭಾವಕೋಶವನ್ನು ಮರೆಯಲಾಗುತ್ತಿದೆ. ಪುಸ್ತಕಗಳು ಬರಹಗಾರರಿಗೆ ಬದ್ಧತೆಯನ್ನು ತಂದುಕೊಡುತ್ತವೆ. ಮೊದಲ ಹಾಗೂ ಕೊನೆಯ ಪುಸ್ತಕಕ್ಕೆ ಅಂತರ ಇರಬೇಕು. ಬರವಣಿಗೆಯ ದೃಷ್ಟಿಕೋನ ಸ್ಪಷ್ಟವಾಗಿರಬೇಕು, ಪುಸ್ತಕ ಭರವಸೆ ಮೂಡಿಸುವಂತಿರಬೇಕು, ಒಳ್ಳೆಯ ದೃಷ್ಟಿಕೋನವನ್ನು ಓದುಗರಲ್ಲಿ ಮೂಡಿಸುವಂತಿರಬೇಕು, ಬರಹಗಾರ ಬರೆಯುತ್ತ ತಾನು ದೊಡ್ಡವನಾಗಬೇಕು, ಓದುಗರನ್ನು ದೊಡ್ಡವರಾಗಿಸಬೇಕು, ತಾನು ಸ್ಪಷ್ಟವಾಗಬೇಕು, ಓದುಗರನ್ನು ಸ್ಪಷ್ಟಗೊಳಿಸಬೇಕು. ಮತ್ತಷ್ಟು ಪುಸ್ತಕಗಳು ಹೊರತರುವಂತಾಗಲಿ” ಎಂದರು.
ವಿಕ್ರಮ ಸಂಪಾದಕ ವೃಶಾಂಕ್ ಭಟ್ ಮಾತನಾಡಿ, “ಇಂದಿನ ಶಿಕ್ಷಣದಿಂದ ಸ್ಪರ್ಧಾತ್ಮಕ ಭಾವನೆ ಬೆಳೆಯುತ್ತಿದೆ, ಮತ್ತೊಬ್ಬರಿಗೋಸ್ಕರ ಮತ್ತು ದೇಶಕ್ಕಾಗಿ ಬದುಕುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು, ಪತ್ರಕರ್ತರು ಎದುರಿಸುವ ಸವಾಲು ಹಾಗೂ ಸದಾ ಚಟುವಟಿಕೆಯಲ್ಲಿರುವ ವ್ಯಕ್ತಿ ಏನೇನು ಆಲೋಚನೆ ಮಾಡಬಲ್ಲ ಎಂಬುವುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, “ಪತ್ರಕರ್ತರು ಕಾರ್ಯದ ಒತ್ತಡದ ನಡುವೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ” ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, “ಒಂದೇ ವಿಚಾರಕ್ಕೆ ಹಲವಾರು ಆಯಾಮಗಳಿರುತ್ತವೆ. ಸಮಾಜಮುಖಿಯಾಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗಬೇಕು. ದೇಶ, ರಾಷ್ಟ್ರೀಯತೆಯೊಂದಿಗೆ ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ, “ಕೊಡಗಿನ ಪತ್ರಕರ್ತಕರ್ತರು ಪ್ರತಿ ಕಾಲಘಟ್ಟದಲ್ಲೂ ಸಾಹಿತ್ಯ ರಚಿಸಿಕೊಂಡು ಬಂದಿದ್ದು, ಮುಂದೆಯೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಲಿ. ಪುಸ್ತಕ 23 ಅಧ್ಯಾಯವನ್ನು ಹೊಂದಿದ್ದು, ಪ್ರತಿ ಅಧ್ಯಾಯ ವಾಸ್ತವತೆಯಿಂದ ಕೂಡಿದೆ” ಎಂದು ಹೇಳಿದರು.
‘ಮನ ಮಾತದಾಗ’ ಕೃತಿ ರಚನೆಕಾರ, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಕೆ.ಆರ್. ಪ್ರಸಿನ್ ಗೌಡ ಮಾತನಾಡಿ, “ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುವುದೋ ಅದೇ ಕ್ಷೇತ್ರದಲ್ಲಿ ಸಾಗಿದರೆ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಬಹುದು” ಎಂದು ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೆ.ಆರ್. ಪ್ರಸಿನ್ ಗೌಡರಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಪತ್ರಕರ್ತ ವಿನುಕುಶಾಲಪ್ಪ ಪ್ರಾರ್ಥಿಸಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು, ಪ್ರೆಸ್ ಕ್ಲಬ್ ನಿರ್ದೇಶಕ ಸುನಿಲ್ ಪೊನ್ನೆಟ್ಟಿ ಸ್ವಾಗತಿಸಿ, ಖಜಾಂಚಿ ಬೊಳ್ಳಜಿರ ಬಿ. ಅಯ್ಯಪ್ಪ ವಂದಿಸಿದರು.