ಮಂಗಳೂರು : ಮಂಗಳೂರಿನ ಫರಂಗಿಪೇಟೆಯ ಅರ್ಕುಳದಲ್ಲಿರುವ ಡಾ. ತುಂಗ ಅವರ ಮನಸ್ವಿನಿ ಆಸ್ಪತ್ರೆಯ ವಠಾರದಲ್ಲಿ ‘ಕುಡ್ಲಗಿಪ್ ಕುಂದಾಪ್ರದರ್ ವಾಟ್ಸಾಪ್ ಬಳಗ’ ಆಯೋಜಿಸಿದ ‘ವಿಶ್ವ ಕುಂದಾಪುರ ಕನ್ನಡ ದಿನಾಚರಣೆ’ಯ ಅಂಗವಾಗಿ ದಿನಾಂಕ 23-07-2023ರಂದು ‘ಕುಂದಾಪ್ರ ಹಬ್ಬ’ವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಡಾ. ಮೊಳಹಳ್ಳಿ ಶಾಂತರಾಮ ಶೆಟ್ಟಿಯವರು “ದಿನಕ್ಕೆ ಕಡಿಮೆ ಎಂದರೂ ಹನ್ನೆರಡು ಗಂಟೆ ಕೆಲಸ ಮಾಡುವ ಶ್ರಮಜೀವಿಗಳೆಂದರೆ ಅದು ಕುಂದಾಪುರದವರು. ಪಂಚನದಿಗಳು ಹರಿಯುವ ನಾಡಾದ ಕುಂದಾಪುರದಿಂದ ಬಂದ ಜನರು ಕುಂದಾಪ್ರ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದಾರೆ ಎಂದರೆ ಅದು ಕೇವಲ ಇಲ್ಲಿರುವ ಎಲ್ಲಾ ಕುಂದಾಪ್ರದವರನ್ನು ಒಟ್ಟುಗೂಡಿಸುವ ಉದ್ದೇಶವೇ ಹೊರತು ಇನ್ನಾವುದೇ ಸ್ವಾರ್ಥ ಇಲ್ಲ” ಎಂಬ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಮಂಗಳೂರು ಇದರ ಅಧ್ಯಕ್ಷರಾದ ಡಾ. ಕೈಲ್ಕೆರೆ ಭಾಸ್ಕರ ಶೆಟ್ಟಿಯವರು “ನೆರೆಯಲ್ಲಿ ಇಲ್ಲಾ ರಾತ್ರಿಯಲ್ಲಿ ಎಲ್ಲೇ ಆಗಲಿ ನಂಬಬಹುದಾದ ಜನರೆಂದರೆ ಅದು ಕುಂದಾಪ್ರದರು. ಅವರನ್ನು ನಂಬಿದವರ ಕೈಬಿಡದ ಹೃದಯವಂತರು ಕುಂದಾಪುರದವರು” ಎನ್ನುವ ಸಂದೇಶವನ್ನು ಸಾರಿದರು.
ಶ್ರೀ ರಾಮಕೃಷ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ ಮಂಗಳೂರಿನ ಪ್ರಾಂಶುಪಾಲರಾದ ಶ್ರೀ ಕಟೀಲು ಬಾಲಕೃಷ್ಣ ಶೆಟ್ಟಿಯವರು “ಇಂಗ್ಲೀಷಿನವರು ಶಾರ್ಟ್ ಹ್ಯಾಂಡ್ ಬಳಕೆಗೆ ತರುವ ಮೊದಲೇ ನಾವು ಕುಂದಾಪುರದವರು ಕುಂದಾಪುರ ಕನ್ನಡದಲ್ಲಿ ಮಾತನಾಡುವ ಶಾರ್ಟ್ ಹ್ಯಾಂಡ್ ಬಳಕೆಗೆ ತಂದವರು. ನಮ್ಮ ಭಾಷೆಗೆ ನಾವೇ ಹಗೆಯಾಗಬಾರದು. ನಮ್ಮ ಭಾಷೆಯನ್ನು ಪ್ರೀತಿಸುವ, ಹೆಮ್ಮೆಯಿಂದ ಬಳಸಿ ಅದನ್ನು ಉಳಿಸುವ” ಎನ್ನುವ ಕಿವಿಮಾತಿನೊಂದಿಗೆ ಕುಂದಾಪುರ ಕನ್ನಡದಲ್ಲೇ ಲಘದಾಟಿಯ ಭಾಷಣವನ್ನು ಮಾಡಿ ನೆರೆದ ಜನರನ್ನು ರಂಜಿಸಿದರು.
ಮಮತಾ ಜಿ. ಐತಾಳರವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ದಯಾನಂದ ಶೆಟ್ಟಿಯವರು ಸ್ವಾಗತಿಸಿದರು. ಡಾ.ಅಣ್ಣಯ್ಯ ಕುಲಾಲ್ ರವರು ಪ್ರಸ್ರಾಪಿಸಿ, ಮನಸ್ವಿನಿ ಆಸ್ಪತ್ರೆಯ ಡಾ. ರವೀಶ್ ತುಂಗ ಧನ್ಯವಾದ ಸಮರ್ಪಣೆ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಿ.ಎ ಶಾಂತರಾಮ್ ಶೆಟ್ಟಿ, ಸಿ.ಎ ಎಸ್.ಎಸ್.ನಾಯಕ್, ರೋ. ಶೇಖರ್ ಶೆಟ್ಟಿ, ಸಂತೋಷ್ ಶೆಟ್ಟಿ ಎ.ಸಿ.ಎ. ಬಾಂಡ್, ಆರ್.ಜೆ. ನಯನ, ಕರುಣಾಕರ ಬಳ್ಕೂರು, ಡಾ.ಪ್ರತಿಭಾ ರೈ ಮೊದಲಾದವರು ಮಾತನಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಆರ್.ಜೆ. ನಯನ ಮತ್ತು ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಬರವಣಿಗೆಯ ವಿವಿಧ ಸ್ಪರ್ಧೆಯಲ್ಲಿ ವಿಜೇತರ ವಿವರವನ್ನು ನಾಗರಾಜ್ ತಲ್ಲಂಜೆ ಹಾಗೂ ಮಾಲಾ ಶೆಟ್ಟಿ ಮತ್ತಿತರರ ಉಸ್ತುವಾರಿಯಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರ ವಿವರವನ್ನು ಆದರ್ಶ್ ಶೆಟ್ಟಿಯವರು ನೀಡಿದರು. ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಹಪ್ರಯೋಜಕರಾದ ಚೇರ್ ಸ್ಟುಡಿಯೋದ ಮಾಲ್ಹಕರಾದ ಶ್ರೀಯುತ ರಾಘವೇಂದ್ರ ನೆಲ್ಲಿಕಟ್ಟೆ, ‘ಭಾಷಿ ಅಲ್ಲಾ ಬದ್ಕ್’ ಸಂಯೋಜನಾ ಸಮಿತಿ ಸದಸ್ಯರು ಮತ್ತು ‘ಕುಡ್ಲಗಿಪ್ ಕುಂದಾಪ್ರದರ್’ ಮತ್ತು ಕುಂದಾಪ್ರ ಕನ್ನಡದ ಅಭಿಮಾನಿಗಳು, ವಿವಿಧ ಸ್ಪರ್ಧೆಗಳ ಬಹುಮಾನದ ಪ್ರಾಯೋಜಕರಾದ ಹಿರಿಯ ಲೆಕ್ಕ ಪರಿಶೋಧಕ ಗುಡ್ರಿ ಶಾಂತರಾಮ್ ಶೆಟ್ಟಿ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಡಾ. ಎಂ. ಅಣ್ಣಯ್ಯ ಕುಲಾಲ್, ಹೋಟೆಲ್ ವಿಷ್ಣು ವೈಭವ ಕುಕ್ಕೆ ಸುಬ್ರಮಣ್ಯ ಇದರ ಶ್ರೀ ದಯಾನಂದ ಶೆಟ್ಟಿ, ಮನಸ್ವಿನಿಯ ಡಾ.ಸುಚಿತ್ರಾ ತುಂಗ, ತುಳುನಾಡು ಕ್ಯಾಟರಿಂಗ್ ನ ಅಲ್ತಾರು ಅಶ್ವತ್ಥಾಮ ಹೆಗ್ಡೆ, ಶ್ರೀ ಕೃಷ್ಣ ಸ್ಯಾನಿಟರಿಯ ಜಡ್ಡಾಡಿ ಪಾಂಡುರಂಗ ಶೆಟ್ಟಿ, ಏಸ್ ಬಾಂಡ್ ಸಂತೋಷ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ವಸಂತ ಶೆಟ್ಟಿ, ಎಸ್. ಕ್ಯೂಬ್ ಪ್ರಮೋಟರ್ಸ್ ನ ಸಂತೋಷ್ ಶೆಟ್ಟಿ ಅಚ್ಲಾಡಿ, ಲೈಫ್ ಟೈಮ್ ಅಸೆಟ್ ಸ್ಟ್ರಾಟಜೀಸ್ ಪ್ರೈವೇಟ್ ಲಿಮಿಟೆಡ್ ಕೊಡಿಯಲ್ ಬೈಲು ಇದರ ನಿರ್ದೇಶಕರಾದ ಶ್ರೀ ಉದಯ ಶೆಟ್ಟಿ ಬೆಳ್ಳಾಲ ಉಪಸ್ಥಿತರಿದ್ದರು.
ಇದೊಂದು ಮಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಕನ್ನಡದ ಜನರ ಕನಸಿನ ಕಾರ್ಯಕ್ರಮವಾಗಿದ್ದು, ಪ್ರಥಮ ಕಾರ್ಯಕ್ರಮವೇ ವಿನೂತನವಾಗಿ ಮೂಡಿಬಂದಿದೆ. ಮುಂದಿನ ಬಾರಿಯೂ ಕೂಡ ಈ ಕಾರ್ಯಕ್ರಮವನ್ನು ಇನ್ನೂ ಅದ್ದೂರಿಯಾಗಿ ನಡೆಸುವ ಸಂಕಲ್ಪವನ್ನು ಕಾರ್ಯಕ್ರಮದ ಉಸ್ತುವಾರಿ ಸಮಿತಿಯ ಸದಸ್ಯರು ಮಾಡಿಕೊಂಡಿದ್ದಾರೆ. ಕೊನೆಯಲ್ಲಿ ಶ್ರೀಪತಿ ಆಚಾರ್ಯರು ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.