ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಹಿರಗಾ ಚಲವಾದಿ ಮತ್ತು ಕಮಲಮ್ಮ ದಂಪತಿಯ ಪುತ್ರರಾಗಿ 31 ಅಕ್ಟೋಬರ್1950ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಮಾರೀಕಾಂಬಾ ಪ್ರಾಥಮಿಕ ಶಾಲೆ ಶಿರಸಿಯಲ್ಲಿ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪ್ರೋಗ್ರೆಸ್ಸಿವ್ ಹೈಸ್ಕೂಲ್ ಶಿರಸಿ ( ಉ. ಕ )ಯಲ್ಲಿ ಪಡೆದರು. ಶಿರಸಿಯ ಎಮ್. ಇ. ಎಸ್. ಕಾಲೇಜಿನಲ್ಲಿ ಪದವಿ ಪಡೆಯಲೆಂದು ಸೇರಿದರಾದರೂ ಆರ್ಥಿಕ ಅಡಚಣೆಯಿಂದಾಗಿ ಬಿ. ಎ. ಎರಡನೆಯ ವರ್ಷಕ್ಕೆ ಕಾಲೇಜು ಶಿಕ್ಷಣ ಮೊಟಕುಗೊಳಿಸುವಂತಾಯಿತು.
ವೃತ್ತಿಯಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಗುಮಾಸ್ತನಾಗಿ ನೌಕರಿಗೆ ಸೇರಿ ತಂತಿ ಮಾಸ್ತರ್ ( ಟೆಲಿಗ್ರಾಫರ್ ) ಹಾಗೂ ಪೋಸ್ಟ್ ಮಾಸ್ತರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಕೊಡಗಿನ ವಿರಾಜಪೇಟೆ, ಸಿದ್ಧಾಪುರ, ಕುಟ್ಟ, ಕುಶಾಲನಗರ, ಗೋಣಿಕೊಪ್ಪಲು, ಪೊನ್ನಂಪೇಟೆ, ಹಾಸನ ಹಾಗೂ ಹಾಸನ ತಾಲೂಕಿನ ಎಲ್ಲಾ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಿಂದ ಹವ್ಯಾಸಿ ನಾಟಕಕಾರ, ಪ್ರವಾಸ ಸಾಹಿತಿ ಹಾಗೂ ವಿವಿಧ ಪ್ರಕಾರಗಳಲ್ಲಿ ಓದು ಹಾಗೂ ಬರವಣಿಗೆಯನ್ನು ಮೈಗೂಡಿಸಿಕೊಂಡವರು.
ಪ್ರೌಢಶಾಲೆಯ ವ್ಯಾಸಾಂಗದಲ್ಲಿ ಇದ್ದಾಗಲೇ ಬರವಣಿಗೆಯ ಮೇಲೆ ಆಸಕ್ತಿ ಮೂಡಿತು .ಮೊದಲ ಬಾರಿಗೆ ಇವರ ‘ಮುರಿದ ಗೊಂಬೆ’ ಎಂಬ ಕಥೆಯೊಂದು ‘ಮಲ್ಲಿಗೆ’ ಮಾಸಿಕದಲ್ಲಿ ಪ್ರಕಟವಾದಾಗ ಅದೊಂದು ಪ್ರತ್ಸಾಹ ಎಂಬಂತಾಯಿತು. ನೂರಾರು ನಾಟಕಗಳಲ್ಲಿ ಅಭಿನಯಿಸಿರುವ ಇವರು ಶಿರಸಿಯಲ್ಲಿ ಇದ್ದಾಗ ಚಿತ್ರನಟ ‘ರಾಮಕೃಷ್ಣ’ (ಇವರ ಸಹಪಾಠಿ)ರ ಜೊತೆಯಲ್ಲಿ ಎಂಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿರಾಜಪೇಟೆಯ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ನಾಟಕ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಪಡೆದಿದ್ದರು. (ತ್ಯಾಗಿ) ಮಡಿಕೇರಿಯ ಟೌನ್ ಹಾಲ್‌ನಲ್ಲಿ ‘ರಣದುಂಧುಭಿ’ ನಾಟಕಕ್ಕೆ ಮೊದಲ ಬಹುಮಾನವನ್ನು ಪಡೆದಿದ್ದಾರೆ. ಈ ನಾಟಕವು ಕರ್ನಾಟಕ ರಾಜ್ಯದ ಅನೇಕ ಕಡೆಗಳಲ್ಲಿ ಪ್ರದರ್ಶನ ಕಂಡಿದೆ.
ಇವರು ಸಾರಸ್ವತ ಲೋಕಕ್ಕೆ ‘ನಿಲುವುಗನ್ನಡಿ’ (ಹಾಸ್ಯ ಹನಿಗವನ ಸಂಕಲನ), ‘ಏಕಾಂಗಿಯ ಎದೆಯ ಹಾಡು’ ಕವನ ಸಂಕಲನ ಇತ್ಯಾದಿ ಕೃತಿಗಳನ್ನು ರಚಿಸಿ ಕನಕಗಿರಿಯ ಸಮೀರ್ ಪ್ರಕಾಶನದಿಂದ ಲೋಕಾರ್ಪಣೆಗೊಳಿಸಿದ್ದಾರೆ. ಹಾಸನ ಆಕಾಶವಾಣಿಯಲ್ಲಿ ‘ಬಿ ‘ ಗ್ರೇಡ್ ಕಲಾವಿದರಾಗಿ ಸುಮಾರು 30ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಇವರ ಹಲವಾರು ಲೇಖನಗಳು ಪ್ರಜಾವಾಣಿ, ಸುಧಾ, ಕರ್ಮವೀರ, ಮಂಗಳಾ, ಸಂಕ್ರಮಣ ಹಾಗೂ ಹಾಸನದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕತೆ, ಕವನ, ಲೇಖನ, ಹಾಸ್ಯ ಬರಹ, ಚುಟುಕು, ಹನಿಗವನ, ಹಾಯ್ಕು, ಟಂಕಾ, ರುಬಾಯಿ ಮುಂತಾದ ಪ್ರಕಾರಗಳಲ್ಲಿ ಬರೆಯುವ ಹವ್ಯಾಸ ಇವರಿಗಿದೆ. ಮೈಸೂರಿನ ಆಸಕ್ತಿ ಪ್ರಕಾಶನದಿಂದ ‘ಏಕಾಂಗಿಯ ಎದೆಯ ಹಾಡು’ ಕನವ ಸಂಕಲನಕ್ಕೆ ಹಾಗೂ ಕನಕಶ್ರೀ ಪ್ರಕಾಶನದಿಂದ ‘ನಿಲುವುಗನ್ನಡಿ’ ಸಂಕಲನಕ್ಕೆ ಪ್ರಶಸ್ತಿ ಪಡೆದಿದ್ದಾರೆ. ‘ಭೂಮಿ’ ಪ್ರತಿಷ್ಠಾನ ಧಾರವಾಡ ಇವರಿಂದ ‘ಭೂಮಿ ಕಾವ್ಯ ಪುರಸ್ಕಾರ’, ಕವಿತಾಕೃಷ್ಣ ಸಾಹಿತ್ಯ ಮಂದಿರ ತುಮಕೂರು ಇವರಿಂದ ‘ಗುರುಕುಲ ಶ್ರೀರತ್ನ’ ಪ್ರಶಸ್ತಿ, ಚನ್ನರಾಯಪಟ್ಟಣ ಮನೆಮನೆ ಕವಿಗೋಷ್ಠಿ ಇವರಿಂದ ರಾಜ್ಯೋತ್ಸವದ ‘ಸಾಹಿತ್ಯ ರತ್ನ’ ಪ್ರಶಸ್ತಿ, ಸಾಹಿತ್ಯ ಚಿಗುರು ಬಳಗದಿಂದ ಬೆಳ್ಳಿ ಪದಕ, ಸಮೀರ್ ಪ್ರಕಾಶನ ಕನಕಗಿರಿ ಇವರಿಂದ ‘ಗಝಲ್ ಪ್ರಶಸ್ತಿ’, ಕೋಡಿಹಳ್ಳಿ ಪ್ರತಿಷ್ಠಾನ ತಿಳವಳ್ಳಿ ಇವರಿಂದ ಸಾಹಿತ್ಯ ಸೇವೆಗಾಗಿ ‘ಗುಬ್ಬಿ ನಂಜುಂಡೇಶ್ವರ ರಾಜ್ಯ ಪ್ರಶಸ್ತಿ’, ಭೂತಾನ್ ನಲ್ಲಿ ಸಾಹಿತ್ಯ ಸೇವೆಗಾಗಿ ಕಥಾಬಿಂದು ಪ್ರಕಾಶನ ಮಂಗಳೂರು ಇವರಿಂದ ಪ್ರಶಸ್ತಿ, ಶ್ರವಣ ಬೆಳಗೊಳದ ಶ್ರೀ ಮಠದಿಂದ ‘ಕಲಾ ನಿಪುಣ’ ಪ್ರಶಸ್ತಿ, ಗಣಕರಂಗ ಧಾರವಾಡ, ವಿಕಾಸ ಟ್ರಸ್ಟ್ ಶಿವಮೊಗ್ಗ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಹೀಗೆ ಹಲವಾರು ಸ್ಪರ್ಧಾ ಬಳಗಗಳಿಂದ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಪತ್ನಿ ಮಾಲತಿ ಕುಮಾರ್ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ನಿವೃತ್ತರಾಗಿದ್ದಾರೆ. ಮೊದಲ ಮಗ ವಿಜೇಶ ಸಾಫ್ಟ್ ವೇರ್ ಇಂಜಿನೀಯರ್ ಹಾಗೂ ಎರಡನೆಯ ಮಗ ಡಾ. ಗೌತಮ್ ರಾಜಸ್ಥಾನದಲ್ಲಿ ಮಾನಸಿಕ ತಜ್ಞರಾಗಿದ್ದರೆ, ಮಗಳು ಮೇಘಾ ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿದ್ದಾರೆ. ಇವರು “ಹೆಚ್ಚು ಹೆಚ್ಚು ಓದಬೇಕು ಹಿಂದಿನ ಕವಿಗಳ ಕೃತಿಗಳನ್ನು ಓದಿ ನಮ್ಮ ಬರವಣಿಗೆಗಳನ್ನು ತಿದ್ದಿಕೊಳ್ಳಬೇಕು. ಇನ್ನೊಬ್ಬ ಸಾಹಿತಿಯ ಸಾಹಿತ್ಯದ ನಕಲು ಮಾಡದೇ ಸ್ವಂತಿಕೆಯನ್ನು ರೂಢಿಕೊಳ್ಳಬೇಕು” ಎಂದು ಇಂದಿನ ಸಾಹಿತ್ಯಾಸಕ್ತರಿಗೆ ಕಿವಿ ಮಾತು ಹೇಳುತ್ತಾರೆ. ತಮ್ಮ ನಿವೃತ್ತಿಯ ನಂತರ ಹಾಸನದಲ್ಲಿ ವಾಸವಾಗಿರುವ ಇವರ ಬದುಕು ಬರೆಹಗಳು ಇನ್ನಷ್ಟು ಉನ್ನತಿಗೇರಿ ಜನಜನಿತರಾಗಲಿ ಎಂದು ಹಾರೈಸೋಣ.
ವೈಲೇಶ್ ಎಸ್. ಪಿ
ಸಾಹಿತಿಗಳು, ಮಡಿಕೇರಿ