ಶಿವಮೊಗ್ಗ : ರಾಜ್ಯ ಸರಕಾರವು ಗಮಕ ಕಲಾವಿದರಿಗೆ ನೀಡುವ 2020-21ನೇ ಸಾಲಿಗೆ ‘ಕುಮಾರವ್ಯಾಸ ಪ್ರಶಸ್ತಿ’ಯನ್ನು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ರಾಜಾರಾಮ ಮೂರ್ತಿ ಅವರಿಗೆ ಘೋಷಿಸಿದೆ.
ಕಳೆದ 50 ವರ್ಷಗಳಿಂದ ಗಮಕ ವ್ಯಾಖ್ಯಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ರಾಜಾರಾಮ ಮೂರ್ತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲೂ ಗಮಕ ವ್ಯಾಖ್ಯಾನ ಕಾರ್ಯಕ್ರಮಗಳನ್ನು ನೀಡಿ ಗಮಕ ಕಲೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಕನ್ನಡದ ಪ್ರಖ್ಯಾತ ಕಾವ್ಯಗಳಾದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪ ಭಾರತ, ತೊರವೆ ರಾಮಾಯಣ, ನಳಚರಿತ್ರೆ, ರನ್ನ ಕವಿಯ ಗದಾಯುದ್ಧ, ರಾಷ್ಟ್ರಕವಿ ಕುವೆಂಪು ಅವರ ರಾಮಾಯಣ ದರ್ಶನಂ, ಕನ್ನಡ ಭಾಗವತ ಮೊದಲಾದ 20ಕ್ಕೂ ಹೆಚ್ಚು ಕಾವ್ಯಗಳನ್ನು ವ್ಯಾಖ್ಯಾನದಲ್ಲಿ ಅಳವಡಿಸಿದ್ದಾರೆ. ರಾಜ್ಯದ 70ಕ್ಕೂ ಹೆಚ್ಚು ಖ್ಯಾತ ಗಮಕಿಗಳೊಡನೆ ವ್ಯಾಖ್ಯಾನ ನಡೆಸಿಕೊಟ್ಟಿದ್ದಾರೆ. ಕರ್ನಾಟಕಕ್ಕೆ ವಿಶಿಷ್ಟವಾದ ಗಮಕ ಕಲೆಗೆ ಪ್ರಶಸ್ತ್ಯ ನೀಡುವ ಏಕೈಕ ಮಾಸಪತ್ರಿಕೆ ‘ಗಮಕ ಸಂಪದ’ ಹದಿನಾರು ವರ್ಷಗಳಿಂದ ನಿಯತವಾಗಿ ಹೊರ ಬರುತ್ತಿರುವ ಈ ಪತ್ರಿಕೆಯ ಸಂಪಾದಕ ಹಾಗೂ ‘ಸಂಕೇತಿ ಸಂಗಮ’ ಮಾಸ ಪತ್ರಿಕೆಯ ಸಂಪಾದಕರೂ ಆಗಿ ಶ್ರೀ ರಾಜಾರಾಮ ಮೂರ್ತಿಯವರು ಹಲವು ಗ್ರಂಥಗಳ ಸಂಪದನೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ ಬೆಂಗಳೂರು ದೂರದರ್ಶನ 2016ರಲ್ಲಿ ಚಂದನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಗಮಕ ಕಲಾ ಪರಿಷತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.
ಶ್ರೀ ರಾಜಾರಾಮ ಮೂರ್ತಿಯವರ ಬಗ್ಗೆ :
ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದವರಾದ ಶ್ರೀ ರಾಜಾರಾಮ ಮೂರ್ತಿಯವರು ಶ್ರೀ ಲಕ್ಷ್ಮೀರಮಣ ಅವಧಾನಿ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಸುಪುತ್ರರಾಗಿದ್ದು, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗಮಕ ವ್ಯಾಖ್ಯಾನ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳಿಂದ ಶ್ರಮಿಸುತ್ತಿರುವ ಇವರು ಅನೇಕ ಗಮಕ ರೂಪಕಗಳ ಸಾಹಿತ್ಯ ರಚಿಸಿ, ನಿರ್ದೇಶನ ಮಾಡಿ ನಾಡಿನ ಉದ್ದಗಲಕ್ಕೂ ಸಾವಿರಾರು ಗಮಕ ಕಾರ್ಯಕ್ರಮಗಳನ್ನು ನೀಡಿದವರು. ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಸಂಚಾಲಕರಾಗಿ ಸತತ ಸೇವೆ ಸಲ್ಲಿಸಿದವರು ರಾಜಾರಾಮ ಮೂರ್ತಿ. ಇವರು ಸುಮಾರು 40 ವರ್ಷಗಳಿಂದ ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಗ್ರಾಮ ‘ಗಮಕ ಗ್ರಾಮ’ ಎಂಬ ಖ್ಯಾತಿ ಪಡೆದಿರುವುದರ ಹಿಂದೆ ರಾಜಾರಾಮ ಮೂರ್ತಿಯವರ ಯೋಗದಾನ ಬಹಳವಿದೆ.
ರಾಜ್ಯಮಟ್ಟದ ನಾಲ್ಕನೇ ಗಮಕ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಇವರು ಸುಮಾರು 70ಕ್ಕೂ ಹೆಚ್ಚು ಗಮಕಿಗಳೊಡನೆ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇವರ ಸಂಪಾದಕತ್ವದಲ್ಲಿ ಅನೇಕ ಅಭಿನಂದನಾ ಗ್ರಂಥಗಳು ಹೊರಬಂದಿವೆ. ‘ಸಂಕೇತ ಪ್ರಕಾಶನ’ದ ಮೂಲಕ ಅನೇಕ ಗ್ರಂಥಗಳನ್ನು ಪ್ರಕಟಿಸಿದ ಗೌರವ, ಮಾತ್ರವಲ್ಲದೆ ಅಭಿನಯ ಚತುರರಾದ ಇವರು ಅನೇಕ ನಾಟಕಗಳ ನಿರ್ದೇಶನ ಮಾಡುವುದರೊಂದಿಗೆ ಅಭಿನಯವನ್ನೂ ಮಾಡಿದ್ದಾರೆ. ಹತ್ತು ಹಲವು ಪ್ರಶಸ್ತಿಗಳ ಜೊತೆ ಪ್ರತಿಷ್ಟಿತ ವೇದಿಕೆಗಳಲ್ಲಿ ಸನ್ಮಾನವನ್ನೂ ಪಡೆದ ಖ್ಯಾತಿ ಇವರದ್ದು.
ಪ್ರವಚನ ಚಕ್ರವರ್ತಿ ಶ್ರೀ ಲಕ್ಷ್ಮೀಕೇಶವ ಶಾಸ್ತ್ರಿಗಳು, ಡಾ. ಪದ್ಮಶ್ರೀ ಮತ್ತೂರು ಕೃಷ್ಣಮೂರ್ತಿಗಳು, ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ವ್ಯಾಖ್ಯಾನ ಚತುರ ವೇ। ಶ್ರೀ ಮಾರ್ಕಂಡೇಯ ಅವಧಾನಿಗಳು ಹಾಗೂ ಗಮಕ ಗಂಧರ್ವ ಶ್ರೀ ಎಚ್.ಆರ್. ಕೇಶವಮೂರ್ತಿಗಳು ಇಂತಹ ನಾಡಿನ ಶ್ರೇಷ್ಠ ಗಮಕಿ-ವ್ಯಾಖ್ಯಾನಕಾರರ ಮಾರ್ಗದರ್ಶನದಲ್ಲಿ ಕಳೆದ 5 ದಶಕಗಳಿಂದ ಗಮಕಕಲೆಗೆ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ಗಮಕಕಲೆಗೆ ಮೀಸಲಾದ ಪತ್ರಿಕೆಯೊಂದರ ಸಂಪಾದಕರಾಗಿ, ಓರ್ವ ನುರಿತ ವ್ಯಾಖ್ಯಾನಕಾರರಾಗಿ, ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ, ಓರ್ವ ಸಂಘಟಕರಾಗಿ ಹಾಗೂ ನಾಡಿನಾದ್ಯಂತ ಗಮಕಕಲೆಗಾಗಿ ದುಡಿಯುತ್ತಿರುವ ಸಂಘ-ಸಂಸ್ಥೆಗಳು ಹಾಗೂ ಕಲಾವಿದರೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡು ಗಮಕಕಲಾ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನ ಗಳಿಸಿದವರು ಇವರು.