ಶಿವಮೊಗ್ಗ : ವಸುಧಾ ಕರಣಿಕ್ ಹಾಗೂ ವೈಶಾಲಿ ಭಟ್ ಇವರ ಜನ್ಮದಿನೋತ್ಸವ ಅಂಗವಾಗಿ ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಎಂಡ್ ಕಲ್ಬರಲ್ ಟ್ರಸ್ಟ್ ಮಂಗಳೂರು ಇದರ ನಿರ್ದೇಶಕಿಯಾದ ಖ್ಯಾತ ಭರತನಾಟ್ಯ ಕಲಾವಿದೆ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರ ನಿರ್ದೇಶನದಲ್ಲಿ ‘ಕುಮಾರವ್ಯಾಸ ನೃತ್ಯ ಭಾರತ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರ ಭಾನುವಾರದಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಲಿದೆ.
ಕರ್ನಾಟಕ ಸಂಘ ಶಿವಮೊಗ್ಗದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಬಳ್ಳಾರಿ ಇದರ ವಿಶೇಷಾಧಿಕಾರಿಗಳಾದ ಶ್ರೀ ಮಂಜುನಾಥ್ ಪಿ.ಎಸ್ ಹಾಗೂ ಸಾಹಿತ್ಯ, ಸಂಗೀತ ಮತ್ತು ಕಲಾ ಸಂಘಟಕರಾದ ಬೆಂಗಳೂರಿನ ಶ್ರೀ ವಿಶ್ವೇಶ್ವರ ಗಾಯತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದೆ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರನ್ನು ಸನ್ಮಾನಿಸಲಾಗುವುದು.
‘ಕುಮಾರವ್ಯಾಸ ನೃತ್ಯ ಭಾರತ’-
ವೀರನಾರಾಯಣ ಸ್ವಾಮಿಯ ಸನ್ನಿಧಿಯಲ್ಲಿ ಗದುಗಿನ ನಾರಣಪ್ಪನಿಂದ ರಚಿತವಾದ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದ ಆಯ್ದ ಸಾಲುಗಳನ್ನು ಶಾಸ್ತ್ರೀಯ ಭರತನಾಟ್ಯದ ನೃತ್ಯಬಂಧಗಳ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ ಇದಾಗಿದೆ. ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾಗಿರುವ ಈ ನಡುಗನ್ನಡ ಕಾವ್ಯದ ಮಂಗಳಾಚರಣೆಯಿಂದ ತೊಡಗಿ ಪಟ್ಟಾಭಿಷೇಕದ ವರೆಗಿನ ಆಯ್ದ ಸನ್ನಿವೇಶಗಳನ್ನು ಈ ಪ್ರದರ್ಶನದಲ್ಲಿ ಭರತನಾಟ್ಯದ ತೋಡಯಂ, ಸ್ವರಜತಿ, ಶಬ್ದಮ್, ಪದವರ್ಣ, ಪದಂ, ಜಾವಳಿ, ತಿಲ್ಲಾನಗಳ ಬಂಧಕ್ಕೆ ಅಳವಡಿಸಲಾಗಿದೆ.


