ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 06-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ ಇವರು ತುಂಬೆಗುತ್ತು ರಾಜಕುಮಾರ ಶೆಟ್ಟಿ ಮತ್ತು ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಇವರ ಸುಪುತ್ರಿ. ಕರ್ನಾಟಕ ಕಲಾಶ್ರೀ ವಿದ್ವಾನ್ ದಿವಂಗತ ಕುದ್ಕಾಡಿ ವಿಶ್ವನಾಥ ರೈ ಮತ್ತು ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈಯವರ ಮೊಮ್ಮಗಳು. ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ (ರಿ.) ಪುತ್ತೂರು ಇದರ ವಿದ್ಯಾರ್ಥಿನಿ. ಮನೆಯಲ್ಲಿಯೇ ನೃತ್ಯ ಶಿಕ್ಷಣದ ಆರಂಭ. ಅಜ್ಜ, ಅಜ್ಜಿ, ಅಮ್ಮ, ಚಿಕ್ಕಮ್ಮ, ಅಕ್ಕನವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿದ್ದು, ತದನಂತರ ಕೆಲವೊಂದು ಪ್ರತಿಷ್ಠಿತ ನೃತ್ಯ ಸಂಸ್ಥೆಗಳು ಏರ್ಪಡಿಸಿದ ನೃತ್ಯ ಕಾರ್ಯಗಾರದಲ್ಲಿ ಭಾಗವಹಿಸಿ ತನ್ನ ನೃತ್ಯಾಸಕ್ತಿಯನ್ನು ಹೆಚ್ಚಿಸಿದರು.
ಸಂಗೀತ ಶಿಕ್ಷಣವನ್ನು ಪಡೆಯುತ್ತಿದ್ದು, ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಇದೀಗ ವಿದ್ವತ್ ಪೂರ್ವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಗಂಧರ್ವ ವಿಶ್ವವಿದ್ಯಾನಿಲಯನದವರು ನಡೆಸುವ ಗಂಧರ್ವ ಪರೀಕ್ಷೆಯ ಪ್ರವೇಶಿಕ ಪ್ರಥಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ, ಡ್ರಾಯಿಂಗ್ ನಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಡ್ರಾಯಿಂಗ್, ಈಜುಗಾರಿಕೆ, ಮುಖವರ್ಣಿಕೆಯ ಅಭ್ಯಾಸಗಳು ಇವರ ಹವ್ಯಾಸಗಳು. ಅನೇಕ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಇವರು ದೇಶ ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿರುತ್ತಾರೆ.