ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸಾಪ್ತಾಹಿಕ ನೃತ್ಯಸರಣಿ ಕಾರ್ಯಕ್ರಮವು ದಿನಾಂಕ 06 ಜನವರಿ 2025ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುಮಾರಿ ಪ್ರಜ್ಞಾ ಪಿ. ಶರ್ಮ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ವಿದುಷಿ ಅರ್ಚನಾ ಪುಣ್ಯೇಶ್ ಇವರ ಶಿಷ್ಯೆಯಾಗಿರುವ ಪ್ರಜ್ಞಾ ಭರತನಾಟ್ಯ ಮತ್ತು ಕೂಚಿಪುಡಿ ಎರಡೂ ಪ್ರಕಾರಗಳನ್ನೂ ಅಭ್ಯಾಸ ಮಾಡಿರುವ ಕಲಾವಿದೆ. 2023ರಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಇವಳು ಕೆ.ಎಸ್.ಇ.ಇ.ಬಿ. ನಡೆಸುವ ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ಮತ್ತು ಕೂಚಿಪುಡಿ ಜೂನಿಯರ್ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ ಮತ್ತು ಈ ವರ್ಷ ಕೂಚಿಪುಡಿ ಸೀನಿಯರ್ ಪರೀಕ್ಷೆಯನ್ನು ಮುಗಿಸಿರುತ್ತಾಳೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕೊಡಲ್ಪಡುವ ಶಿಷ್ಯ ವೇತನ ಪಡೆದಿದ್ದು, ಅಂತರಾಷ್ಟ್ರೀಯ ವಿಶ್ವ ನೃತ್ಯ ಚಾಂಪಿಯನ್‌ನಲ್ಲಿ 1ನೇ ರನ್ನರ್ ಅಪ್ ಆಗಿರುತ್ತಾಳೆ. ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಈಕೆಗೆ ‘ಹವ್ಯಕ ಪಲ್ಲವ ಪುರಸ್ಕಾರ’ ಲಭಿಸಿದೆ.