ಕಾಸರಗೋಡು: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ದಿನಾಂಕ 06-05-2023 ಕಾಸರಗೋಡಿನ ಕುಂಬಳೆಯಲ್ಲಿ ಗಡಿ ಉತ್ಸವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು.
ಗೀತಾರವರ ಪ್ರಾರ್ಥನಾ ನಂತರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸದ್ರಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀ ಮತಿ ರಾಣಿ ಪುಷ್ಪಲತಾ ದೇವಿಯವರು ಗಡಿನಾಡಿನಲ್ಲಿ ಆಗುತ್ತಿರುವ ಕನ್ನಡ ಭಾಷೆಗೆ ಸಿಗುವ ಮಾನ್ಯತೆ ಇಳಿಮುಖವಾಗುವಾಗ ಕೇರಳ ಗಡಿ ಪ್ರದೇಶದ ಹಲವಾರು ಕಡೆ ಕನ್ನಡ ಭಾಷೆಯ ಉನ್ನತೀಕರಣಕ್ಕಾಗಿ ಹಾಕುತ್ತಿರುವ ಈ ಹೆಜ್ಜೆಗಳು ಸಾರ್ಥಕವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಒಂದನೆಯದು ಬೀದಿಗಿಳಿದು ನಡೆಸುವ ಹೋರಾಟ. ಅದರ ಕಾವು ಈಗ ತಗ್ಗುತ್ತಾ ಬಂದಿದೆ. ಎರಡನೆಯದು ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟ. ಅದು ಮುಂದಿನ ತಲೆಮಾರಿಗೆ ದಾಖಲೆಯಾಗಿ ಉಳಿಯುವ ಮಾದರಿಯದು. ಇಲ್ಲಿಂದ ಆರು ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗಿವೆ. ಇದು ಇಲ್ಲಿ ಕನ್ನಡ ಇತ್ತು, ಇದು ಕನ್ನಡ ನಾಡಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕವಾದ ಸಂಗತಿ. ಮೂರನೆಯದು ಕಾನೂನಾತ್ಮಕವಾದ ಹೋರಾಟ. ಕಳ್ಳಿಗೆ ಮಹಾಬಲ ಭಂಡಾರಿ. ಯು.ಪಿ. ಕುಣಿಕುಳ್ಳಾಯ ಮುಂತಾದವರು ಕೋರ್ಟಿಗೆ ಹೋಗಿ ಕಾಸರಗೋಡಿನ ಕನ್ನಡಿಗರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಿಕೊಟ್ಟಿದ್ದಾರೆ. ಈಗ ಆ ರೀತಿಯ ಹೋರಾಟವೂ ತುಸು ತಗ್ಗಿದಂತೆ ಭಾಸವಾಗುತ್ತಿದೆ. ಸದ್ಯ ಕಾಸರಗೋಡಿನಲ್ಲಿ ಕನ್ನಡ ಉಳಿಯಬೇಕಿದ್ದರೆ ಅದನ್ನು ಸಾಂಸ್ಕೃತಿಕವಾಗಿ ಉಳಿಸಲು ಸಾಧ್ಯವಾಗಬೇಕು. ಕಾಸರಗೋಡಿನ ಜನತೆಗೆ ಸಾಂಸ್ಕೃತಿಕವಾಗಿ ಕನ್ನಡದ ಪ್ರೌಢಿಮೆಯನ್ನು ತಿಳಿಸುವಂತಹ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಕಾಗಿವೆ. ಜನಸಾಮಾನ್ಯರನ್ನು ಕನ್ನಡದ ಹೆಸರಲ್ಲಿ ಅಭಿಮಾನದಿಂದ ಒಂದುಗೂಡುವಂತೆ ಮಾಡ ಬೇಕಿದ್ದರೆ ಬೇರೆ ದಾರಿಗಳಿಲ್ಲ. ಕಾರ್ಯಕ್ರಮಗಳ ಆಧಿಕ್ಯ ಮತ್ತು ಸಂಘಟನೆಗಳ ಆಧಿಕ್ಯ ಎರಡೂ ಕಾಸರಗೋಡು ಕನ್ನಡ ಹೋರಾಟದ ದೃಷ್ಟಿಯಿಂದ ಕೊರತೆಗಳಾಗಿಯೇ ಕಂಡುಬರುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನುಕೆ.ಎಸ್.ಎಸ್.ಎ.ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಎ.ಎಲ್.ಪಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸ್ಮಿತಾ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಗೀತಾ ರವರು ಪ್ರಾರ್ಥನೆಗೈದರು. ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿದರು. ಗಂಗಾಧರ್ ಗಾಂಧಿ ವಂದಿಸಿದರು . ರೇಖಾ ಸುದೇಶ್ ರಾವ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ಕವಿಗೋಷ್ಠಿಯನ್ನು ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಚಾಲನೆಗೊಳಿಸಿದರು. ಅವರು ಮಾತನಾಡುತ್ತಾ ಕಾವ್ಯ ರಚನೆಗೆ ಅಭ್ಯಾಸ ಮತ್ತು ಮಾರ್ಗದರ್ಶನಗಳಿದ್ದಾಗ ಪರಿಪೂರ್ಣತೆ ಬರುತ್ತದೆ ಹಾಗೂ ತಾನು ಸಹ ಹಲವರಿಂದ ಬಹಳಷ್ಟು ಕಲಿತಿದ್ದೇನೆ ಎಂದರು.
ಅನಂತರ ಹಿರಿಯ ಕವಿ ಜಯಾನಂದ ಪೆರಾಜೆ ,ಕೊಳ್ಚಪ್ಪೆ ಗೋವಿಂದ ಭಟ್,ಅವಿನಾಶ್ ಶಾಸ್ತ್ರಿ ಪೆರ್ಲ,ಸೌಮ್ಯ ಆರ್ ಶೆಟ್ಟಿ,ಪರಿಮಳ ರಾವ್,ಭಾಸ್ಕರ ವರ್ಕಾಡಿ,ಜಯಲಕ್ಷ್ಮಿ ಶರತ್ ಶೆಟ್ಟಿ,ರಶ್ಮಿ ಸನಿಲ್ ಪ್ರಣತಿ ಎನ್,ಸೌಮ್ಯಾ ಜಿ, ರೇಖಾ ಸುದೇಶ್ ರಾವ್, ವಿರಾಜ್ ಅಡೂರ್,ಆದ್ಯಂತ್ ಅಡೂರು,ಸುಮಂಗಲಾ ಡಿ ಶೆಟ್ಟಿ ಮುಂತಾದ ಮೂವತ್ತಕ್ಕೂ ಹೆಚ್ಚು ಕವಿಗಳು ಸ್ವರಚಿತ ಕಾವ್ಯ ವಾಚನ ಮಾಡಿದರು .
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ ಮಂಗಳಾ ಆಸ್ಪತ್ರೆಯ ವೈದ್ಯ ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿ ಇವರು ಕಾವ್ಯ ಸ್ವರೂಪ, ಸರಿಯಾದ ಜ್ಞಾನ ಇಲ್ಲದೆ ಆಗುವ ಅಬದ್ಧತೆಗಳು, ವ್ಯಾಕರಣ ಕಾಗುಣಿತಾದಿ ದೋಷಗಳು , ಜಾಲತಾಣದ ಕಾರಣ ಉಂಟಾದ ಸಾಹಿತ್ಯ ಕ್ಷೇತ್ರದ ವೇಗ ಹಾಗೂ ಅಷ್ಟೇ ಪ್ರಮಾಣದ ಸಾರ ರಾಹಿತ್ಯ, ಕೇವಲ ಅತಿಪ್ರಚಾರದಿಂದ ಪಡೆಯುವ ಪ್ರಶಸ್ತಿಗಳಿಂದ ನಿಜವಾಗಿ ಪ್ರಬುದ್ಧರಾದ ಕವಿಗಳು ಮೂಲೆಗುಂಪಾಗುವುದು ಇತ್ಯಾದಿಗಳ ಸಹಿತವಾಗಿ ಮೀಮಾಂಸೆ ಮಾಡಿದರಲ್ಲದೆ ಎಲ್ಲಾ ವಾಚಕರ ಕಾವ್ಯದ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿದರು
ತದನಂತರ ನಾರಾಯಣ ಮಂಗಲ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃ ತಿಕ ಸಂಘ ಕಾಸರಗೋಡು ಮತ್ತಿತರ ತಂಡಗಳಿಂದ ಸಾಂಸ್ಕೃತಿಕ ಉತ್ಸವ ಮನೋರಂಜನ ಕಾರ್ಯಕ್ರಮಗಳು ಜರುಗಿದವು
ಭಾಗವಹಿಸಿದ ಎಲ್ಲ ಕವಿಗಳಿಗೆ ಹಾಗೂ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.