ತೆಕ್ಕಟ್ಟೆ : ಶ್ರೀ ಸಿದ್ಧಿವಿನಾಯಕ ಕ್ಯಾಶೂ ಇಂಡಸ್ಟ್ರೀಸ್ ಕೆದೂರು ಪ್ರಾಯೋಜನೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ದಿನಾಂಕ 10 ಆಗಸ್ಟ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕುಂದಗನ್ನಡ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಗನ್ನಡದ ಹಿರಿಯ ಸಾಹಿತಿ, ವಕೀಲ ಎ.ಎಸ್.ಎನ್. ಹೆಬ್ಬಾರ್ “ಕುಂದಗನ್ನಡದ ಸೊಗಡನ್ನು ದೇಶ ವಿದೇಶಗಳೂ ಕೊಂಡಾಡಿದೆ. ಸೆಕಿ ಗೆಮಿತ್, ಎದಿ ಹೊಯಿಲ್, ಹಾಸತ್ ಹೊದಿತ್ ಹೀಗೆ ಕುಂದಗನ್ನಡ ಸಹಸ್ರ ಸಹಸ್ರ ಶಬ್ದವು ಕುಂದಗನ್ನಡದಲ್ಲಿ ಹಾಸಿ ಹೋಗಿದೆ. ಆಷಾಡದಲ್ಲಿ ಕುಂದಾಪುರ ಕನ್ನಡ ದಿನವನ್ನಾಗಿ ನಿಗದಿಸಿ, ದೇಶ ವಿದೇಶದಲ್ಲಿ ಆಚರಿಸುವ ಹಾಗೆ ಸಂಘಟಕರನ್ನು ಹುರಿದುಂಬಿಸಿದವರು ವಸಂತ ಗಿಳಿಯಾರ್. ಇದಕ್ಕೆ ಕುಂದಗನ್ನಡ ಸಾಹಿತ್ಯವನ್ನು ಯಕ್ಷಗಾನದಲ್ಲಿ ಛಂದೋಬದ್ಧವಾಗಿ ಯಕ್ಷಗಾನ ಪ್ರಸಂಗವನ್ನು ರಚಿಸುವುದು ಸಾಧಾರಣ ವಿಷಯವಲ್ಲ. ಪ್ರಸಾದ್ ಮೊಗೆಬೆಟ್ಟು ಈ ಪ್ರಸಂಗವನ್ನು ರಚಿಸಿ ಕುಂದಗನ್ನಡದ ಜೊತೆಗೆ ಬೆರೆತು ಹೋದರು. ಅವರನ್ನು ಎಂದೂ ಕುಂದಗನ್ನಡದ ಅಭಿಮಾನಿಗಳು ಮರೆಯಲಾರರು” ಎಂದು ಹೇಳಿದರು.
ಮುಖ್ಯ ಅತಿಥಿ ಜನ ಸೇವಾ ಟ್ರಸ್ಟಿನ ವಸಂತ್ ಗಿಳಿಯಾರ್ ಮಾತನಾಡಿ, “ಕುಂದಗನ್ನಡದಲ್ಲಿ ಅನೇಕರು ಪ್ರಸಿದ್ಧರು. ಹಿಂದೆಲ್ಲ ಕುಂದಗನ್ನಡವನ್ನು ಮಾತನ್ನಾಡುವುದು ಘನತೆಗೆ ಧಕ್ಕೆ ಎನ್ನುವ ಕಾಲವಿತ್ತು. ಆ ಕಾಲದಲ್ಲೂ ಹಿರಿಯರಾದ ಎ.ಎಸ್.ಎನ್. ಹೆಬ್ಬಾರ್ ಕುಂದಗನ್ನಡದಲ್ಲಿ ಭಾಷಣ ಮಾಡಿ ಗೆದ್ದವರು, ಹೆಸರುವಾಸಿಯಾದವರು. ಶುದ್ಧ ಕನ್ನಡದ ಭಾಷೆಗೆ ಅತೀ ಹತ್ತಿರವಾಗಿರುವ ಭಾಷೆ ಕುಂದಗನ್ನಡ. ಇಂತಹ ಭಾಷೆಗೆ ದಿನ ನಿಗದಿಯಾದಾಗ ಇಡೀ ದೇಶದಲ್ಲಿಯೇ ಕುಂದಗನ್ನಡದ ಜನ ಕಾರ್ಯಕ್ರಮದ ಮೂಲಕ ಮೆರೆಸಿದರು. ಕುಂದಗನ್ನಡದಲ್ಲಿ ಕಥೆ ಬರೆಯಿರಿ ಎಂದಾಗ ಈ ಭಾರಿ 1500ಕ್ಕೂ ಹೆಚ್ಚೂ ಕಥೆಗಳು ನಮ್ಮ ಫೈಲ್ ಸೇರಿತು. ಇದಕ್ಕೆ ಉತ್ಸಾಹಿಗಳೆಷ್ಟು? ಎನ್ನುವುದನ್ನು ಈ ಮೂಲಕ ನಾವು ಗುರುತಿಸಬಹುದು. ಕುಂದಗನ್ನಡ ಅಜರಾಮರ” ಎಂದರು.
ಡಾ. ಕೆ.ಎಸ್. ಕಾರಂತ್ ಶುಭಾಶಂಸನೆಗೈದರು. ರೊ| ಚಂದ್ರಶೇಖರ ಮೆಂಡನ್, ರೊ| ತಿಮ್ಮ ಪೂಜಾರಿ ಉಪಸ್ಥಿತರಿದ್ದರು. ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಪ್ರಾಸ್ತಾವಿಕ ಮಾತನ್ನಾಡಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಯಕ್ಷಗಾನ ‘ಹೆಣ್ ಬಣ್ಣ’ ರಂಗದಲ್ಲಿ ಪ್ರಸ್ತುತಿಗೊಂಡಿತು.