ಕುರುಡಪದವು : ಕುರಿಯ ವಿಠಲ ಶಾಸ್ತ್ರಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಕುರುಡಪದವು ಇದರ ವತಿಯಿಂದ ಪ್ರತಿ ವರ್ಷವೂ ಜರಗುವಂತೆ ದಿ. ಕುರಿಯ ವಿಠಲ ಶಾಸ್ತ್ರಿ, ದಿ. ನೆಡ್ಲೆ ನರಸಿಂಹ ಭಟ್ ಮತ್ತು ದಿ. ಕರುವೋಳು ದೇರಣ್ಣ ಶೆಟ್ಟಿ ಸಂಸ್ಮರಣ ಕಾರ್ಯಕ್ರಮವು ಗಾನಲಹರಿ, ಸನ್ಮಾನ, ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಮೇ 13ರಂದು ಕುರುಡಪದವು ಪ್ರೌಢಶಾಲೆಯಲ್ಲಿ ಜರಗಿತು.
ಸಂಜೆ ಮೂರು ಗಂಟೆಯಿಂದ ಬೊಟ್ಟಿಕೆರೆ ಪರೀಕ್ಷಿತ್ ಪೂಂಜ ಮತ್ತು ಬಳಗದವರಿಂದ ಗಾನ ಲಹರಿ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳೂರು ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಯಕ್ಷಗಾನ ಕಲಾವಿದರಾದ ಶ್ರೀಧರ ಐತಾಳ ಪಣಂಬೂರು ಇವರಿಗೆ ಕುರಿಯ ಪ್ರಶಸ್ತಿಯನ್ನೂ, ಬಡಗಿನ ಖ್ಯಾತ ಭಾಗವತರಾದ ರಾಘವೇಂದ್ರ ಮಯ್ಯರಿಗೆ ನೆಡ್ಲೆ ಪ್ರಶಸ್ತಿಯನ್ನೂ, ಸೂರಿಕುಮೇರಿ ಗೋವಿಂದ ಭಟ್ಟರಿಗೆ ಕರುವೋಳು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶ್ರೀದೇವಿ ಪ್ರೌಢಶಾಲೆ ಪುಣಚ ಇದರ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಂಗಮ್ಮ ಹರಿಕೃಷ್ಣ ಶಾಸ್ತ್ರಿ ಸಂಸ್ಮರಣ ಭಾಷಣ ಮಾಡಿದರು. ಬಳಿಕ ಸನ್ಮಾನಿತರನ್ನು ಸೇರಾಜೆ ಗೋಪಾಲಕೃಷ್ಣ ಭಟ್ ಅಭಿನಂದಿಸಿದರು. ಖ್ಯಾತ ತಾಳಮದ್ದಳೆ ಅರ್ಥದಾರಿ ಬೆಳ್ಳಾರೆ ರಾಮ ಜೋಯಿಸ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕುರಿಯ ವೆಂಕಟರಮಣ ಶಾಸ್ತ್ರಿ, ಕುರಿಯ ಗಣಪತಿ ಶಾಸ್ತ್ರಿ, ಕರುವೋಳು ದಿನೇಶ ಶೆಟ್ಟಿ, ನೆಡ್ಲೆ ರಾಮ ಭಟ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸೇರಾಜೆ ಶ್ರೀನಿವಾಸ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಕುರಿಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಸೇರಾಜೆ ಸೀತಾರಾಮ ಭಟ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’, ‘ಹನುಮೋದ್ಭವ’, ‘ಮಹಿರಾವಣ ಕಾಳಗ’ ಯಕ್ಷಗಾನ ಬಯಲಾಟ ನಡೆಯಿತು.