ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಬಂಟಮಲೆ ಅಕಾಡೆಮಿ (ರಿ) ಗುತ್ತಿಗಾರು ಸುಳ್ಯ ಇವರ ವತಿಯಿಂದ ಪುಸ್ತಕ ಬಿಡುಗಡೆ ಹಾಗೂ ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-03-2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಇವರು ವಹಿಸಲಿದ್ದು, ಸಾಹಿತಿ ಪಾರ್ವತೀಶ ಬಿಳಿದಾಳೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ಕಲ್ಲೆ ಶಿವೋತ್ತಮ ರಾವ್ ಇವರ ‘ಬದುಕು ಹಾಗೂ ಕೊಡುಗೆ’ ಬಗ್ಗೆ ಬರಹಗಾರರಾದ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ‘ಬಂಟಮಲೆ ಅಕಾಡೆಮಿ ಹಾಗೂ ಪ್ರಶಸ್ತಿ’ ಕುರಿತು ನಾಟಕಕಾರರು ಹಾಗೂ ಸಾಮಾಜಿಕ ಚಿಂತಕರಾದ ಎ.ಕೆ. ಹಿಮಕರ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲ್ಲೆ ಶಿವೋತ್ತಮ ರಾವ್ ಇವರಿಗೆ ‘ಕುವೆಂಪು ಬಂಟಮಲೆ ಪ್ರಶಸ್ತಿ’ಯನ್ನು ಪುತ್ತೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ. ಎನ್. ಸುಕುಮಾರ ಗೌಡ ಇವರು ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ ಹಾಗೂ ಕಲ್ಲೆ ಶಿವೋತ್ತಮ ರಾವ್ ಇವರ ‘ಜನಪ್ರಗತಿಯ ಪಂಜು’ ಎಂಬ ಕೃತಿ ಬಿಡುಗಡೆಗೊಳ್ಳಲಿದೆ.
ಈ ಬಾರಿಯ ‘ಕುವೆಂಪು ಬಂಟಮಲೆ ಪ್ರಶಸ್ತಿ’ಯನ್ನು ಖ್ಯಾತ ಪತ್ರಿಕೋದ್ಯಮಿ ಕಲ್ಲೆ ಶಿವೋತ್ತಮ ರಾವ್ ಅವರಿಗೆ ನೀಡಲು ನಿರ್ಧರಿಸಲಾಗಿದ್ದು, ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಾರ್ವತೀಶ ಬಿಳಿದಾಳೆ, ಅಧ್ಯಕ್ಷ ಕೆ.ಆರ್. ತೇಜಕುಮಾರ್ ಬಡ್ಡಡ್ಕ, ಕೆ.ಆರ್. ವಿದ್ಯಾಧರ ಹಾಗೂ ಕಾರ್ಯದರ್ಶಿಯಾದ ಎ.ಕೆ. ಹಿಮಕರ ಆಯ್ಕೆ ಸಮಿತಿಯಲ್ಲಿ ಇದ್ದು ಈ ಆಯ್ಕೆಯನ್ನು ಮಾಡಿಕೊಂಡಿತ್ತಾರೆ
ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು, ನಾರಾಯಣ ಕಲ್ಲೆ ಹಾಗೂ ಶ್ರೀಮತಿ ರತ್ನಾವತಿ ದಂಪತಿಯ ಮಗನಾಗಿ 29 ಆಗಸ್ಟ್ 1930ರಂದು ಕಾರ್ಕಳ ಬಳಿಯ ಕಲ್ಯ ಗ್ರಾಮದಲ್ಲಿ ಹುಟ್ಟಿದವರು. ತಂದೆ ನಾರಾಯಣ ಕಲ್ಲೆ ಹಾಗೂ ಅವರ ತಂದೆ ಮೂಡ್ಲಿ ಮಂಜಪ್ಪನವರು ಸಹ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ಬರೆದ ಪತ್ರಕರ್ತರು ಹಾಗೂ ಬರಹಗಾರರಾಗಿದ್ದರು. ಕಾರ್ಕಳದ ಪ್ರಸಿದ್ಧ ಬೌಂಟಿ ಮನೆತನದವರಾಗಿದ್ದಾರೆ. ಈಗ 95ರ ವಯೋಮಾನದ ಕಲ್ಲೆ ಶಿವೋತ್ತಮ ರಾಯರು 1950ರ ದಶಕದಿಂದಲೂ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ. ಜಯ ಹಿಂದ್, ರಾಷ್ಟ್ರ ಬಂಧು, ರಾಷ್ಟ್ರಮತ, ವಿಶಾಲ ಕರ್ನಾಟಕ, ಸ್ವರಾಜ್, ಜನಪದ, ಜನಪ್ರಗತಿ ಹಾಗೂ ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ ಸುಮಾರು 75 ವರ್ಷಗಳಷ್ಟು ಸುದೀರ್ಘ ಅವಧಿಯ ಬರವಣಿಗೆಯ ಬದುಕು ಕಲ್ಲೆ ಶಿವೋತ್ತಮ ರಾವ್ ಅವರದಾಗಿದೆ. ಜನಪ್ರಗತಿ ವಾರಪತ್ರಿಕೆಯ ಸಂಪಾದಕರಾಗಿ ಕರ್ನಾಟಕದ ಸಾಮಾಜಿಕ ಬದುಕನ್ನು ಬಹಳ ಪರಿಣಾಮಕಾರಿಯಾಗಿ ಪ್ರಭಾವಿಸಿದ ಪತ್ರಕರ್ತ ಎಂಬ ಹೆಗ್ಗಳಿಕೆ ಕಲ್ಲೆ ಅವರದ್ದು.
20ನೇ ಶತಮಾನದ ಆರಂಭ ಕಾಲದಲ್ಲಿ ಕರ್ನಾಟಕದಲ್ಲಿ ಶುರುವಾದ ಸಾಮಾಜಿಕ ಜಾಗೃತಿ, ಬ್ರಾಹ್ಮಣೇತರರ ಹಕ್ಕೊತ್ತಾಯಗಳು, ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಪರಿಶಿಷ್ಟ ಸಮುದಾಯಗಳು ಹಿಂದುಳಿದ ವರ್ಗಗಳಲ್ಲಿನ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯ ಆಶಯಗಳಿಗೆ ಕಲ್ಲೆ ಶಿವೋತ್ತಮ ರಾಯರು ಬಲ ತುಂಬಿದರು. ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಸಾಹಿತ್ಯದ ವಿದ್ಯಮಾನಗಳು, ಕನ್ನಡ ಚಳುವಳಿಗಳು, 1970ರ ದಶಕದ ಭೂಸುಧಾರಣೆ, ಸಾಮಾಜಿಕ ನ್ಯಾಯದ ವಿದ್ಯಮಾನಗಳು ಘಟಿಸುವಾಗ ಜನಪ್ರಗತಿ ಪತ್ರಿಕೆ ಹಾಗೂ ಸಂಪಾದಕರಾದ ಕಲ್ಲೆ ಶಿವೋತ್ತಮ ರಾಯರು ಇದರೊಂದಿಗೆ ಸಹಭಾಗಿಯಾಗಿದ್ದರು. ಕಲ್ಲೆ ಶಿವೋತ್ತಮ ರಾಯರು ಸಂಪಾದಕರಾಗಿದ್ದ ‘ಜನಪ್ರಗತಿ’ ವಾರಪತ್ರಿಕೆಯು ಕರ್ನಾಟಕದ ಜನಜೀವನದೊಂದಿಗೆ, ಬದುಕಿನ ಉದ್ದೇಶಗಳೊಂದಿಗೆ ಸಂವಾದ ನಡೆಸಿತು. ಕನ್ನಡ ಸಮಾಜದೊಂದಿಗೆ ಸಾವಯವ ಸಂಬಂಧ ಏರ್ಪಡಿಸಿಕೊಂಡಿತು. 1960ರಿಂದ 1990ರ ಅವಧಿಯ ನಡುವೆ ಜನಪ್ರಗತಿಯು ಕರ್ನಾಟಕದ ಜನಸಾಮಾನ್ಯರ ಪತ್ರಿಕೆಯಾಗಿತ್ತು. ಕಲ್ಲೆ ಶಿವೋತ್ತಮ ರಾಯರು ಧೈರ್ಯಶಾಲಿಗಳು, ಕನಸುಗಾರರು, ಬುದ್ಧಿವಂತರು, ಕುಶಾಗ್ರಾಮತಿಯೂ ಹೌದು. ತುಂಬ ಜೀವನ ನಡೆಸಿದ ಇವರು ಈಗಲೂ ಲೌಕಿಕ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಆಸಕ್ತಿ ಉಳಿಸಿಕೊಂಡಿದ್ದಾರೆ. ಈ ಸನ್ಮಾನವು ಕನ್ನಡ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಕಲ್ಲೆ ಶಿವೋತ್ತಮ ರಾಯರ ಸಾಧನೆಗೆ ಸಂದ ಗೌರವವಾಗಿದೆ.