ವಿಜಯಪುರ : ಶ್ರೀ ಕುಮಾರವ್ಯಾಸ ಭಾರತ ವೇದಿಕೆ ವತಿಯಿಂದ ದಿನಾಂಕ 29 ಡಿಸೆಂಬರ್ 2025ರಂದು ವಿಜಯಪುರದ ಕುಮಾರವ್ಯಾಸ ಭಾರತ ಭವನದಲ್ಲಿ ಕುವೆಂಪು ಜಯಂತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಉದಯ್ ಕುಲಕರ್ಣಿ “ಕುವೆಂಪು ಸಾರಿದ ಮೌಲ್ಯಗಳು ಮನುಕುಲದ ಅಭ್ಯುದಯಕ್ಕಾಗಿ ಇವೆ. ತಮ್ಮ ಕಥೆ, ಕಾದಂಬರಿ, ಕವಿತೆಗಳು ಹಾಗೂ ವೈಚಾರಿಕ ಲೇಖನಗಳ ಮೂಲಕ ಕುವೆಂಪು ತಮ್ಮ ನಿಲುವುಗಳನ್ನು ಕನ್ನಡ ಜನತೆಗೆ ತಿಳಿಸಿದರು. ಪರರಿಗಾಗಿ ಯಾರು ಬದುಕುವರೋ ಅವರೇ ನಿಜವಾಗಿ ಬದುಕುತ್ತಾರೆ. ಶಿಕ್ಷಣ, ಉದ್ಯೋಗಕ್ಕಾಗಿ ಅಥವಾ ಮಾಹಿತಿಗಾಗಿ ಅಲ್ಲ. ಮೌಲ್ಯಯುತವಾದ ಶಿಕ್ಷಣ ಸಮಾನತೆ, ಸಹೋದರತ್ವ, ವಿಶಾಲ ರಾಷ್ಟ್ರೀಯತೆ, ಮಾನವ ಏಕತೆ, ಜಾತಿ ಭೇದ ನಿರಾಕರಣೆ ಮುಂತಾದವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವದು. ವ್ಯಕ್ತಿಗೆ ಗೌರವ ಸಿಗಬೇಕು. ಶೋಷಣೆ, ಅಂಧಶ್ರದ್ಧೆ, ಅಂಧಾನುಕರಣೆ ಇವುಗಳು ತೊಲಗಬೇಕು. ಮಾನವನು ಪ್ರಕೃತಿಯ ಜೊತೆ ಬೆಳೆಯಬೇಕು. ಪ್ರಕೃತಿ, ಪ್ರಾಣಿ ಸಂಕುಲ ರಕ್ಷಿಸಬೇಕು. ಕನ್ನಡ ಭಾಷೆ ರಕ್ಷಣೆ ನಮ್ಮ ಅಸ್ಮಿತೆ. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಜಗತ್ತಿನ ಸದಸ್ಯರಾಗಿ ನಾವು ಬದುಕಬೇಕು. ಸನ್ನಡತೆ, ಸದಾಚಾರದಿಂದ ವಿಶ್ವಮಾನವರಾಗಬೇಕು” ಎಂದು ಕುವೆಂಪು ಸಂದೇಶ ನೀಡಿದರು.
ಸಭಿಕರು ಶ್ರೀಯುತರ ಭಾಷಣವನ್ನು ದೀರ್ಘ ಚಪ್ಪಾಳೆ ಮೂಲಕ ಸ್ವಾಗತಿಸಿದರು. ವೇದಿಕೆಯ ಮೇಲೆ ಕರ್ನಾಟಕ ಕಲಾ ಸಂಘದ ಅಧ್ಯಕ್ಷ ಪತ್ರಕರ್ತ ಬಾಬೂರಾವ್ ಕುಲಕರ್ಣಿ, ಶ್ರೀ ಉದಯ್ ಕುಲಕರ್ಣಿ, ಶ್ರೀಮತಿ ಶಾಂತಾ ಕೌತಾಳ್, ಶ್ರೀ ಕಲ್ಯಾಣರಾವ್ ದೇಶಪಾಂಡೆ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ಎಂಬ ನಾಡಗೀತೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿಗಳಾದ ಶ್ರೀ ಉದಯ್ ಕುಲಕರ್ಣಿ ದಂಪತಿಗಳನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು.
ನಂತರ ನಡೆದ ಗಮಕ ಪ್ರಸಂಗದಲ್ಲಿ ಕುವೆಂಪು ವಿರಚಿತ ‘ರಾಮಾಯಣ ದರ್ಶನಂ’ ಕಾವ್ಯದ ಅಯೋಧ್ಯಾ ಸಂಪುಟದ ‘ಕುಣಿದಳುರಿಯ ಉರ್ವಶಿ’ ಭಾಗದ ‘ನಗೆಗೆ ಮೀರಿರ್ದುದಾ ಧೂಮದೃಶ್ಯಂ’ ಪ್ರಸಂಗವನ್ನು ಗಮಕ ವಿದೂಷಿ ಶ್ರೀಮತಿ ಶಾಂತಾ ಕೌತಾಳ ಇವರು ಸುಶ್ರಾವ್ಯವಾಗಿ ವಾಚಿಸಿದರು. ಈ ಸಂದರ್ಭದಲ್ಲಿ ಜನಸಾಮಾನ್ಯರಂತೆ ಅರಣ್ಯದಲ್ಲಿ ವಾಸಿಸುತ್ತಿದ್ದ ರಾಮ ಲಕ್ಷ್ಮಣ ಸೀತೆಯರು, ಸಾಂಸಾರಿಕ ಕಷ್ಟಗಳನ್ನು ಹೇಗೆ ಎದುರಿಸಿದರು ಎಂಬ ಚಿತ್ರಣವನ್ನು ವ್ಯಾಖ್ಯಾನಕಾರ ಕಲ್ಯಾಣರಾವ್ ದೇಶಪಾಂಡೆಯವರು ತಮ್ಮ ವ್ಯಾಖ್ಯಾನದಲ್ಲಿ ಚಿತ್ರಿಸಿದರು. ಸೀತೆಯ ಮುಖಕ್ಕೆ ಒಲೆಯ ಕಪ್ಪು ಹತ್ತುವ ಸನ್ನಿವೇಶ, ರಾಮನು ಆಕೆಯನ್ನು ಕೋತಿಗೆ ಹೋಲಿಸಿದ್ದು ಹಾಸ್ಯದ ವಾತಾವರಣ ಮೂಡಿಸಿತು.

ಕಾರ್ಯಕ್ರಮದ ಕೊನೆಗೆ ಕುವೆಂಪು ವಿರಚಿತ ಗೀತೆಗಳ ಗಾಯನ ಕಾರ್ಯಕ್ರಮವಿತ್ತು. ಯುವ ಸಂಗೀತ ಕಲಾವಿದೆ ಕುಮಾರಿ ಮಾಳವಿಕಾ ಜೋಶಿಯವರು ‘ಓ ನನ್ನ ಚೇತನ ಆಗು ನೀ ಅನಿಕೇತನ, ಸುರ ಸೌಂದರ್ಯವೇ ತಿರೆಗಿಳಿತಂದಿದೆ ಇದು ಬರಿ ಹೂವಲ್ಲ, ಆನಂದಮಯ ಈ ಜಗ ಹೃದಯ’ ಎಂಬ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಸುವರ್ಣ ಕರ್ನಾಟಕ ರಾಜ್ಯೋತ್ಸವ ವಿಜೇತ ಗಾಯಕಿ ಲತಾ ಜಹಗೀರದಾರರು ‘ಹೋಗುವೆನು ನಾ ಹೋಗುವೆನು ನಾ ನನ್ನ ಒಲವಿನ ಗೂಡಿಗೆ, ಬಾರಿಸು ಕನ್ನಡ ಡಿಂಡಿಮವ, ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ ಇಂದುಮುಖಿ’ ಎಂಬ ಗೀತೆಗಳನ್ನು ಹಾಡಿ ಕೇಳುಗರನ್ನೆಲ್ಲ ಬೃಂದಾವನಕ್ಕೆ ಕರೆದೊಯ್ದರು. ಬಾಬೂರಾವ್ ಕುಲಕರ್ಣಿಯವರು ‘ದೋಣಿ ಸಾಗಲಿ ಮುಂದೆ ಹೋಗಲಿ’ ಎಂಬ ಗೀತೆಯನ್ನು ತಮ್ಮ ಮಧುರ ಸ್ವರದಲ್ಲಿ ಹಾಡಿದರು. ಈ ಇಬ್ಬರು ಕಲಾವಿದರಿಗೆ ಕುಮಾರ ಮಂಥನ್ ಜೋಶಿ ಸಮರ್ಪಕವಾದ ತಬಲಾ ಸಾಥ್ ನೀಡಿದರು. ಅತಿಥಿ ಸ್ಥಾನದಲ್ಲಿದ್ದ ಪತ್ರಕರ್ತ ಶ್ರೀ ಬಾಬುರಾವ್ ಕುಲಕರ್ಣಿಯವರು ಕುಮಾರ ವ್ಯಾಸ ವೇದಿಕೆಯು ನಿಸ್ವಾರ್ಥವಾಗಿ ಗಮಕ ಹಾಗೂ ಸಂಗೀತ ಕಾರ್ಯಕ್ರಮಗಳ ಮೂಲಕ ಸಲ್ಲಿಸುತ್ತಿರುವ ಕನ್ನಡ ನಾಡು, ನುಡಿ ಸೇವೆಯನ್ನು ಪ್ರಶಂಶಿಸಿದರು.

ಸಮಾರಂಭದಲ್ಲಿ ಡಾ. ಮಹಾನಂದಾ ಪಾಟೀಲ್, ಗಮಕಿ ಪುಷ್ಪಾ ಕುಲಕರ್ಣಿ, ಗಮಕಿ ಭೂದೇವಿ ಕುಲಕರ್ಣಿ, ರಾಘವೇಂದ್ರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಅನುರಾಧಾ ಜಹಗೀರದಾರ್, ಉಪಾಧ್ಯಕ್ಷೆ ವಿದ್ಯಾ ದೇಶಪಾಂಡೆ, ಸಂಧ್ಯಾ ಸಂಜೀವ್, ಸಂಜೀವ್ ಕುಲಕರ್ಣಿ, ರಮಾ ಪಾಟೀಲ್, ಅಂಬಿಕಾ ಪಾಟೀಲ್, ಪ್ರಮಿಲಾ ದೇಶಪಾಂಡೆ, ಮಂಗಲಾ ದೇಶಪಾಂಡೆ, ಸವಿತಾ ಕುಲಕರ್ಣಿ, ಅನಂತ್ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಪ್ರಕಾಶ್ ದೇಶಪಾಂಡೆ, ಶಶಿಕಲಾ ಅಪರಂಜಿ, ವಿಜಯೀಂದ್ರ ಪಾಟೀಲ್, ಶ್ರೀದೇವಿ ಅಗರಖೇಡ್, ಪರಿಮಳಾ ಕಂಚಿ, ಮೋಹನ್ ಕೌತಾಳ್ ಮುಂತಾದವರು ಭಾಗವಹಿಸಿದ್ದರು.
