ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸ್ವರ್ಣಭೂಮಿ ಫೌಂಡೇಷನ್ ಕರ್ನಾಟಕ ಇವರ ಸಹಕಾರದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ, ವಿಶೇಷ ಉಪನ್ಯಾಸ, ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ 31-12-2023ರಂದು ಮೈಸೂರಿನ ವಿಜಯನಗರ ಮೊದಲನೇ ಹಂತ, ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ದೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿದಾನಂದ ಗೌಡ ಇವರು ಉದ್ಘಾಟಿಸಲಿದ್ದಾರೆ. ಖ್ಯಾತ ವಿದ್ವಾಂಸರಾದ ಡಾ. ಸಿ.ಪಿ. ಕೃಷ್ಣ ಕುಮಾರ್ ಇವರು ಶ್ರೀ ಲಿಖಿತ್ ಹೊನ್ನಾವರ ಇವರ ಕೃತಿ ‘ಭಾವಭಂಗ ಕಲ್ಪನಾತರಂಗ’ದ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಖ್ಯಾತ ಸಾಹಿತಿ ಶ್ರೀ ಬಿ. ಸತೀಶ್ ಜವರೇಗೌಡ ಇವರು ಕೃತಿ ಪರಿಚಯ ಮತ್ತು ‘ಕುವೆಂಪು ವಿಚಾರಧಾರೆ ಮತ್ತು ಯುವಜನರು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿರುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಶತಶೃಂಗ ಸಾಹಿತ್ಯ ಪ್ರಶಸ್ತಿ’ ಮತ್ತು ‘ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಕವಿಗೋಷ್ಠಿ ಮತ್ತು ರಾಯಚೂರು ಜಿಲ್ಲೆಯ ಶ್ರೀ ದುರ್ಗಾದೇವಿ ಸಾಂಸ್ಕೃತಿಕ ಡೊಳ್ಳಿನ ಸಂಘದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.