ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ನಡೆಯುವ ಸರಣಿ ಕಾರ್ಯಕ್ರಮದ 96ನೇ ಕಾರ್ಯಕ್ರಮವು ದಿನಾಂಕ 12 ಜುಲೈ 2025ರ ಶನಿವಾರದಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಥೇಮಾ ಥಿಯೇಟರ್ ಬೆಂಗಳೂರು ತಂಡವು ಡಾ. ಎಸ್. ವಿ. ಕಶ್ಯಪ್ ಇವರ ರಚನೆಯನ್ನು ಡಾ. ಸುಷ್ಮಾ ಎಸ್. ವಿ. ನಿರ್ದೇಶಿಸಿದ ಎಲ್. ಎಸ್. ಡಿ. ನಾಟಕ ಪ್ರದರ್ಶನಗೊಂಡಿತು.
ಕೇವಲ ಮೂರು ಜನ ಮಹಿಳಾ ಕಲಾವಿದರು ಅಭಿನಯಿಸಿದ ಈ ನಾಟಕ ಕಚಗುಳಿ ಇಡುವ ಸಂಭಾಷಣೆಯಿಂದ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತಾದರೂ ನಗೆಯ ಹೊಗೆಯ ಹಿಂದಿರುವ ನೋವಿನ, ವಿಷಾದದ ಛಾಯೆಯು ಚಿಂತನೆಗೆ ಗುರಿ ಮಾಡಿತು.
ಗ್ಲೋಬಲೈಸೇಷನ್ನಿಂದಾಗಿ ಆದ ಆರ್ಥಿಕ ಪ್ರಗತಿ ಸಮಾಜದ ಒಂದು ವರ್ಗದವರನ್ನು ಸ್ಥಿತಿವಂತರಾಗಿಸುತ್ತಿರುವ ನಡುವೆ ಕಸ ಮುಸರೆ ತೊಳೆಯುವ ಮನೆ ಕೆಲಸ ಮಾಡುವ ಬಡ ಹೆಣೈಕಳ ಆಸೆ ಆಕಾಂಕ್ಷೆಗಳು ಕನಸು ಕನವರಿಕೆಗಳನ್ನು ಇರುವುದನ್ನು ಇದ್ದಂತೆಯೆ ಪ್ರದರ್ಶಿಸಿದ ರೀತಿ ಪ್ರೇಕ್ಷಕರ ಮನ ಮುಟ್ಟಿತು. ಎಲ್. ಎಸ್. ಡಿ. ಅಂದರೆ ಲಕ್ಷ್ಮಿ, ಸರಸ್ವತಿ ಮತ್ತು ದುರ್ಗಿ ಮೂವರು ಮನೆ ಕೆಲಸದವರ ಪಾತ್ರದಲ್ಲಿ ನಾಟಕದ ವಿನ್ಯಾಸ ಮಾಡಿ ನಿರ್ದೇಶಿಸಿದ ಡಾ ಸುಷ್ಮಾ ಹಾಗೂ ಅವರ ಜೊತೆಗೆ ಸ್ನೇಹಾ ಕಪ್ಪಣ್ಣ ಮತ್ತು ಸುನೇತ್ರಾ ಪಂಡಿತ್ ಮೂವರ ಒಳ್ಳೆಯ ಒಡನಾಟದ ಅಭಿನಯ ಇದು ಏಕಾಂಕ ನಾಟಕ ಎಂಬ ಅಂಶವನ್ನೇ ಮರೆಸಿತು.
ಜನಪದರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಕಾಟಂ ನಲ್ಲೂರು ಪಾಪಣ್ಣನವರು ನಿರ್ದೇಶಕರನ್ನು ಮತ್ತು ಕಲಾವಿದರನ್ನು ಸನ್ಮಾನಿಸಿ ಮಾತನಾಡಿ ನಾಟಕದ ಬಗ್ಗ ತಮ್ಮ ಮಚ್ಚುಗೆಯನ್ನು ವ್ಯಕ್ತಪಡಿಸಿದರು. ಜನಪದರು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಗಳಾದ ಸಿದ್ಧೇಶ್ವರ ನನಸುಮನೆ, ಎಂ. ಸುರೇಶ್, ವೇಂಕಟಾಚಲಪತಿ, ಮುನಿರಾಜು ಬಿದರೇಅಗ್ರಹಾರ , ತಾವರೇಕೆರೆ ಶಿವಕುಮಾರ್, ಬಸವರಾಜು, ಬಾಗೇಪಲ್ಲಿ ಕೃಷ್ಣಮೂರ್ತಿ, ಕೃಷ್ಣ ಸುರೇಶ, ರಾಜಣ್ಣ, ಜಿ. ಬಿ. ಚಂದ್ರಶೇಖರ್, ರಾಜಣ್ಣ, ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು.