ಬೆಂಗಳೂರು : ಬ್ಯಾಂಗಲೋರ್ ಪ್ಲೇಯರ್ಸ್ ಪ್ರಸ್ತುತ ಪಡಿಸುವ ನೂತನ ನಾಟಕ ‘ಲಕ್ಷ್ಮೀ ಕಟಾಕ್ಷ’ ಇದರ ಮೊದಲ ಪ್ರದರ್ಶನವು ದಿನಾಂಕ 13 ಜುಲೈ 2025ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಲಿದೆ.
ಕಿಶೋರ್ ಕುಮಾರ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಸಹಾಯಕ ನಿರ್ದೇಶಕರಾಗಿ ಗಿರೀಶ್ ಹಾಗೂ ಹೃತಿಕ್, ಸಂಗೀತದಲ್ಲಿ ಸುಭಾಸ್ ಹಾಗೂ ಶರತ್, ರಂಗ ಸಜ್ಜಿಕೆಯಲ್ಲಿ ತೇಜಸ್, ವೇಷ ಭೂಷಣದಲ್ಲಿ ಉಲ್ಲಾಸ್, ಬೆಳಕಿನ ಸಂಯೋಜನೆಯಲ್ಲಿ ಶ್ರೀನಿಧಿ, ಹಾಗೂ ಪ್ರಚಾರದಲ್ಲಿ ಯಶವಂತ್ ಸಹಕರಿಸಲಿದ್ದಾರೆ.
‘ಲಕ್ಷ್ಮೀ ಕಟಾಕ್ಷ’ :
ಪ್ರತಿಯೊಬ್ಬ ಮನುಷ್ಯನು ಜೀವನವೆಂಬ ಪಥದಲ್ಲಿ, ಸಂಬಂಧಗಳ ಹಳಿಯಲ್ಲಿ ನಡೆಯುತ್ತಿದ್ದಾನೆ. ಆ ನಡೆಗೆ ಒಂದು ಉದ್ದೇಶ, ಆ ಉದ್ದೇಶದ ಹಿಂದೆ ಹಲವಾರು ಲೆಕ್ಕಾಚಾರಗಳು, ಹಾಗಿದ್ದರೆ ಜೀವನ ಲೆಕ್ಕಾಚಾರವೇ? ಹಾಗಿದ್ದಲ್ಲಿ ಸಂಬಂಧಗಳು? ಲೆಕ್ಕಾಚಾರದ ಉದ್ದೇಶದಿಂದ ಸಂಬಂಧಗಳು ಬಂಧಿತವಾಯಿತೆ?
ಗಂಡ – ಹೆಂಡ್ತಿ, ಪ್ರೀತಿ – ಕಾಮ
ಗುರು – ಶಿಷ್ಯ, ವಿದ್ಯೆ – ವ್ಯಾಪಾರ
ಹೆತ್ತವರು – ಮಕ್ಕಳು, ಮಮತೆ – ತಾತ್ಸಾರ
ಒಡಹುಟ್ಟಿದವರು – ಒಡನಾಡಿಗಳು, ತ್ಯಾಗ – ಸ್ವಾರ್ಥ
ಪ್ರಜೆ – ರಾಜಕಾರಣಿ, ಭರವಸೆ – ಭ್ರಷ್ಟಾಚಾರ
ಯಾವುದು ಕಲ್ಮಶ? ಯಾವುದು ನಿಷ್ಕಲ್ಮಶ?
ಈ ಸ್ವಾರ್ಥದ ಜಗತ್ತಿನಲ್ಲಿ ನಿರ್ಮಲವಾದ ಸಂಬಂಧಗಳು ಉಸಿರಾಡಲು ಸಾಧ್ಯವೇ? ಹಾಗದರೆ ಸಂಬಂಧಗಳು ಮಾನವನ ಸೃಷ್ಟಿಯೇ? ಅಥವಾ ದೈವ ನಿರ್ಮಿತವೆ? ಸಂಭಂದಗಳಿಲ್ಲದೆ ಮನುಷ್ಯನು ಜೀವಿಸಲು ಸಾಧ್ಯವಿಲ್ಲವೇ? ಇಲ್ಲಿ ಅಧಿಕಾರದ ವ್ಯಾಮೋಹದಲ್ಲಿ, ಕಳ್ಳತನ, ಭ್ರಷ್ಟತೆ, ದರ್ಪ, ಸುಳ್ಳು, ಮೋಸ, ವಂಚನೆ ಹೀಗೆ ಎಲ್ಲವನ್ನೂ ರೂಢಿಯಾಗಿಸಿ, ಸಂಬಂಧಗಳ ಸುಳಿಯಲ್ಲಿ, ಸ್ವಾರ್ಥದ ಕನಸೇರಿ, ಹಣ, ಅಧಿಕಾರ, ಆಸ್ತಿ, ಅಂತಸ್ತು, ಕೀರ್ತಿ, ಯಶಸ್ಸು, ಯಾವುದರ ಹಿಂದೆ ಓಡುತ್ತಿದ್ದಾರೆ? ಅದರ ಫಲವಾದರೂ ಏನು? ಯಾಕೀ ಲೆಕ್ಕಾಚಾರ? ಎಲ್ಲಿಗೀ ಓಟ? ಮನುಷ್ಯನ ಸಂಪೂರ್ಣತೆಯು ಸಾರ್ಥಕ್ಯಕ್ಕೆ ಏರುವುದು, ಉದ್ದೇಶ ಘನ್ನೋದೇಶವಾದಾಗಲ್ಲವೇ? ಅದಕ್ಕೆ ಮೊದಲು ನಾವು ಮಾನವರಾಗ ಬೇಕಲ್ಲವೆ? ಹಾಗಾದರೆ ಅದನ್ನು ಅರಿಯಲು ಹುಡುಕಾಟ ಬೇಕಲ್ಲವೆ? ಆ ಹುಡುಕಾಟದಲ್ಲಿ ನಮಗೆ ದೊರಕಬೇಕಿರುವ ಕೃಪೆಯೇ ಲಕ್ಷ್ಮಿ ಕಟಾಕ್ಷ!
ಇದೊಂದು ವಿಡಂಬನಾತ್ಮಕ, ಸಾಂಸಾರಿಕ ರಾಜಕೀಯ ನಾಟಕ.