ಮಂಗಳೂರು : ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ಭಟ್ (ಸನ್ ಭಟ್ರು) ಇವರು 22 ಡಿಸೆಂಬರ್ 2024ರಂದು ನಿಧನ ಹೊಂದಿದರು. ಇವರಿಗೆ 74 ವರ್ಷ ವಯಸ್ಸಾಗಿತ್ತು.
ಕಳವಾರು ಶ್ರೀ ಬೆಂಕಿನಾಥೇಶ್ವರ ಭಜನಾ ಮಂಡಳಿಯ ಹುಟ್ಟಿಗೆ ಕಾರಣಕರ್ತರಾಗಿದ್ದ ಇವರು ಪ್ರಸ್ತುತ ಮಂಡಳಿಯ ಗೌರವಾಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಭಜನೆ, ನಾಟಕ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಶ್ರೀಯುತರು ಪುರೋಹಿತರಾಗಿ ಜನಾನುರಾಗಿಯಾಗಿದ್ದರು. ಜೋಕಟ್ಟೆ ಶ್ರೀ ವಿಜಯ ವಿಠಲ ಭಜನ ಮಂದಿರ, ಬಜಪೆ ವಿಜಯ ವಿಠಲ ಭಜನ ಮಂದಿರ ಮತ್ತು ಶಾಂತಿನಗರ ಶ್ರೀ ಜಗದಾಂಬಿಕ ಭಜನ ಮಂದಿರದಲ್ಲಿಯೂ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.