ಬೆಂಗಳೂರು: ಸಂಜಯನಗರದಲ್ಲಿ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಸಂಸ್ಥೆಯು ಕಳೆದ 15 ವರ್ಷಗಳಿಂದ ಕಲೆಗಾಗಿ ಶ್ರಮಿಸುತ್ತಿರುವ ವಿವಿಧ ವಿಭಾಗಗಳಲ್ಲಿ ಸದ್ದಿಲ್ಲದೇ ಸಾಧನೆಗೈದು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಮಹಿಳೆಯರನ್ನು ಗುರುತಿಸಿ ‘ಲಾಸ್ಯ ಸಾಧಕಿ ಪ್ರಶಸ್ತಿ’ ಮೂಲಕ ಗೌರವಿಸುತ್ತಿದೆ.
ಕಲಾವಿದೆಯರು, ಸಮಾಜ ಸುಧಾರಕಿಯರು, ವೈದ್ಯೆಯರು, ಹಸಿರು ಯೋಧೆಯರು, ಯೋಗ ಪಟುಗಳು ಹೀಗೆ ಹತ್ತು ಹಲವಾರು ವಿಭಾಗದಲ್ಲಿ ನುರಿತವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024ರ ಪ್ರತಿಷ್ಠಿತ ಈ ಪ್ರಶಸ್ತಿಗೆ ನಾಲ್ವರು ಸಾಧಕಿಯರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ಸ್ಥಾಪಕ, ನಿರ್ದೇಶಕಿ ಡಾ. ಲಕ್ಷ್ಮೀರೇಖಾ ಅರುಣ್ ತಿಳಿಸಿದ್ದಾರೆ.
ಸಾಧಕಿಯರಾದ ಖ್ಯಾತ ಭರತನಾಟ್ಯ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಲೇಖಕಿ ಕವಯತ್ರಿ ಹಾಗೂ ನಾಟ್ಯಾರಾಧನಾ ಮತ್ತು ಯಕ್ಷಾರಾಧನಾ ಕಲಾಕೇಂದ್ರ ಸಂಸ್ಥಾಪಕಿ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಅಂತಾರಾಷ್ಟ್ರೀಯ ಒಡಿಸ್ಸಿ ನೃತ್ಯಪಟು, ಲೇಖಕಿ ಮತ್ತು ಒಡಿಸ್ಸಾದ ಬನ್ನಿ ಬಿಲಾನ್ ಸಂಸ್ಥೆ ನಿರ್ದೇಶಕಿ ವಿದುಷಿ ಲೀನಾ ಮೊಹಾಂತಿ, ಖ್ಯಾತ ಮನೋವೈದ್ಯೆ ಹಾಗೂ ಲೇಖಕಿ, ವೈದ್ಯ ಕಲಾರಂಗ ಮತ್ತು ಓಂ ಸಂಸ್ಥೆ ಸ್ಥಾಪಕ ನಿರ್ದೇಶಕಿ ಡಾ. ಪ್ರಮೀಳಾದೇವಿ ಹಾಗೂ ಸಂಶೋಧಕಿ ಲೇಖಕಿ, ಸಮಾಜ ಸುಧಾರಕಿ, ಯೋಗಪಟು ಹಾಗೂ ಲೇಪಾಕ್ಷಿಯ ಆಶ್ರಯ ಸೇವಾಸಂಸ್ಥೆ ಸಹಸಂಸ್ಥಾಪಕಿ ನಳಿನಾಕ್ಷಿ ಶಿವಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ರೂ.15,000/- ನಗದು ಮತ್ತು ಸನ್ಮಾನವನ್ನು ಒಳಗೊಂಡಿದ್ದು, ದಿನಾಂಕ 29-03-2024ರಂದು 15ನೇ ಅಡ್ಡರಸ್ತೆ, ಎಂ.ಎಲ್.ಎ ಶಾಲೆ ಎದುರಿನ ಸೇವಾ ಸದನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 12ರವರೆಗೆ ಒಡಿಸ್ಸಿ ನೃತ್ಯ ಪ್ರದರ್ಶನ ಹಾಗೂ ಯಕ್ಷಗಾನ ನಡೆಯಲಿದ್ದು, ಬಳಿಕ ಪ್ರಶಸ್ತಿ ಪ್ರದಾನ ನಡೆಯಲಿದೆ.