ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದಿ. ಟಿ. ಶ್ರೀನಿವಾಸ ಸ್ಮರಣಾರ್ಥ ‘ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಹಿರಿಯ ಬರಹಗಾರ ಸಂಪಟೂರು ವಿಶ್ವನಾಥ್ ಮತ್ತು ಸಂಶೋಧಕ ಡಾ. ಶ್ರೀವತ್ಸ ಎಸ್. ವಟಿ ಆಯ್ಕೆಯಾಗಿದ್ದಾರೆ. ಬರಹಗಾರ್ತಿ ಡಾ. ವರದಾ ಶ್ರೀನಿವಾಸ್ ಈ ದತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು, ಯಾವುದೇ ಮಹತ್ವದ ಪುರಸ್ಕಾರಗಳು ಬಾರದೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವ ಸಾಧಕರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.
2024ನೆಯ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಹಿರಿಯ ಬರಹಗಾರ ಬೆಂಗಳೂರಿನ ಸಂಪಟೂರು ವಿಶ್ವನಾಥ್ 1966ರಿಂದಲೂ ನಿರಂತರವಾಗಿ ಅರವತ್ತು ವರ್ಷಗಳಿಂದ ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ಐದು ಸಾವಿರಕ್ಕೂ ಹೆಚ್ಚು ಬರಹಗಳನ್ನು ಪ್ರಕಟಿಸಿದ್ದಾರೆ. ಶಿಕ್ಷಕರಾಗಿ 36 ವರ್ಷ ಮಹತ್ವದ ಸೇವೆ ಸಲ್ಲಿಸಿರುವ ಅವರು 1982 ಮತ್ತು 1995ರಲ್ಲಿ ಅತ್ಯುತ್ತಮ ಶಿಕ್ಷಕ ಗೌರವಕ್ಕೂ ಪಾತ್ರರಾಗಿದ್ದಾರೆ. ಇದುವರೆಗೂ 140ಕ್ಕೂ ಹೆಚ್ಚು ಕೃತಿಗಳು ವಿವಿಧ ಪ್ರಕಾರಗಳಲ್ಲಿ ಅಚ್ಚಾಗಿದ್ದು ರಸಪ್ರಶ್ನೆ, ಚಿತ್ರ ವಿಮರ್ಶೆಯಂತಹ ಕ್ಷೇತ್ರದಲ್ಲಿಯೂ ವಿಶಿಷ್ಟ ಕೊಡುಗೆ ನೀಡಿದ ಅವರು ವಿಜ್ಞಾನ ಮತ್ತು ಮಕ್ಕಳ ಸಾಹಿತ್ಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.
2025ನೆಯ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಶ್ರೀವತ್ಸ ಎಸ್. ವಟಿ ಹಾಸನ ಜಿಲ್ಲೆಯ ಬೇಲೂರಿನವರು. ಹಳಗನ್ನಡ ಕಾವ್ಯಬೋಧನೆ, ಪುರಾತನ ಶಾಸನಗಳ ಅಧ್ಯಯನ, ಪುರಾತನ ದೇವಾಲಯಗಳ ಅಧ್ಯಯನ ಅವರ ಆಸಕ್ತಿಯ ಪ್ರಮುಖ ಕ್ಷೇತ್ರಗಳು. ‘ಭಾರತೀಯ ವಾಙ್ಮಯದಲ್ಲಿ ಕಾಲಗಣನೆ’ ಅವರ ಪಿಎಚ್.ಡಿ. ಪ್ರಬಂಧ. ಪುರಾತತ್ವ ಅಧ್ಯಯನದಲ್ಲಿ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿರುವ ಅವರು ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ವರದಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಎಚ್.ಬಿ. ಮದನ್ ಗೌಡ, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಭಾಗವಹಿಸಿದ್ದರು. ದಿ. ಟಿ. ಶ್ರೀನಿವಾಸ ಸ್ಮರಣಾರ್ಥ ‘ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಸಂಪಟೂರು ವಿಶ್ವನಾಥ್ ಮತ್ತು ಡಾ. ಶ್ರೀವತ್ಸ ಎಸ್. ವಟಿ ಇವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಅವರಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಆಶಿಸಿದ್ದಾರೆ.