ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಕೆ. ವಿಷ್ಣು ಕೆ. ಇವರ ಮೂರು ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ‘ಮೋದಿಜೀ ನಮ್ಮ ಮನೆಗೆ ಬಂದರು (ಅಂತರಾತ್ಮದ ಭೇಟಿ)’ ಕೃತಿಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಪರಮೇಶ್ವರ ಭಟ್ ಇವರು, ‘ಅಂತರ್ಯುದ್ದ (ಮನೋವೈಜ್ಞಾನಿಕ ಕಥೆಗಳು)’ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಹರಿ ನಾರಾಯಣ ಮಾಡಾವು ಮತ್ತು ‘ಐತರೇಯೋಪನಿಷದ್ (ಕನ್ನಡ ಭಾಷಾಂತರ)’ ಕೃತಿಯನ್ನು ಶಿಕ್ಷಕಿ ಕುಮಾರಿ ಉಮಾ ಇವರುಗಳು ಲೋಕಾರ್ಪಣೆಗೊಳಿಸಲಿದ್ದಾರೆ.
ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಷ್ಣು ಕೆ. ಇವರು, ತಮ್ಮ ವೃತ್ತಿಜೀವನದಲ್ಲಿ ಕೇವಲ ಪಾಠ ಬೋಧನೆಗೆ ಸೀಮಿತರಾಗದೆ, ಉತ್ತಮ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳ ಮನಸಲ್ಲಿ ಬಿತ್ತಿದ ಅಪರೂಪದ ಶಿಕ್ಷಕರು. ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಿದ ಈ ಮಹನೀಯರು, ನಿವೃತ್ತಿಯ ನಂತರವೂ ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ಮುಂದುವರಿಸಿಕೊಂಡು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುಮಾರು ನಾಲ್ಕು ಉಪನಿಷತ್ತುಗಳನ್ನು ಕನ್ನಡಕ್ಕೆ ಅನುವಾದಿಸಿರುವ ಗೌರವವೂ ಇವರಿಗೆ ಸಲ್ಲುತ್ತದೆ.

