ಬೈಂದೂರು : ಬೈಂದೂರಿನಲ್ಲಿ ನಡೆದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ಆಯೋಜಿಸಿದ ಲಾವಣ್ಯದ ಮಕ್ಕಳ ‘ರಂಗತರಬೇತಿ ಶಿಬಿರದ ನಾಟಕೋತ್ಸವ’ವನ್ನು ದಿನಾಂಕ 03-05-2023ರಂದು ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಉದ್ಘಾಟಿಸಿದರು. “ನಮ್ಮ ಶ್ರೀಮಂತ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಜನಮಾನಸದಲ್ಲಿ ಕಾಪಿಡುವಲ್ಲಿ ರಂಗಕಲೆಗಳು ಮಹತ್ವದ ಪಾತ್ರವಹಿಸುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ನಿನಾಸಂ ಪದವೀಧರ, ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತ್ಯನಾ ಕೊಡೇರಿ ಮಾತನಾಡಿ, “ಲಾವಣ್ಯವು ಮಕ್ಕಳಿಗೆ ನಾಟಕ ಪೂರ್ವಾಭ್ಯಾಸ ಮಾಡಿ ನಾಟಕ ಮಾಡಿಸುತ್ತಿಲ್ಲ. ಬದಲಾಗಿ ಮಕ್ಕಳಿಗೆ ರಂಗತರಬೇತಿ ಮೂಲಕ ಹೊರಹೊಮ್ಮಿದ ಒಂದು ಕೃತಿಯನ್ನು ಈ ವೇದಿಕೆಯಲ್ಲಿ ಪ್ರದರ್ಶನ ನೀಡಲಾಗುತ್ತಿದೆ. ಬೇಸಿಗೆ ರಜಾದಿನಗಳಲ್ಲಿ ಎಲ್ಲೆಲ್ಲೋ ಆಟವಾಡಿಕೊಂಡಿರುವ ದಿನಕಳೆಯುವ ಮಕ್ಕಳನ್ನು ಕರೆತಂದು ಒಟ್ಟಾಗಿ ಕೂಡಿ ಕಲಿಯುವಿಕೆ ವಾತಾವಣ ಸೃಷ್ಟಿಸಿ ಒಂದು ಉತ್ತಮ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವುದು ಒಳ್ಳೆಯ ಕೆಲಸ.” ಎಂದು ಹೇಳಿದರು.
ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ವಿತರಿಸಲಾಯಿತು. ರಂಗನಿರ್ದಶಕ ಬಿ. ಗಣೇಶ ಕಾರಂತ್ ಇದ್ದರು. ಮೂರ್ತಿ ಬೈಂದೂರು ಪ್ರಾರ್ಥಿಸಿದರು. ಸಂಸ್ಥೆಯ ವ್ಯವಸ್ಥಾಪಕ ಗಣಪತಿ ಎಸ್. ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಹರೇಗೋಡು ವಿಶ್ವನಾಥ ಆಚಾರ್ಯ ವಂದಿಸಿದರು. ಅನಂತರ ಮಕ್ಕಳಿಂದ ‘ನಮಗೂ ಸ್ವಾತಂತ್ರ್ಯ ಬೇಕು’ ಹಾಗೂ ‘ಝೂಂ ಝೂಂ ಆನೆ ಮತ್ತು ಪುಟ್ಟಿ’ ಎಂಬ ಎರಡು ನಾಟಕಗಳು ಪ್ರದರ್ಶನಗೊಂಡಿತು.