ಬೆಂಗಳೂರು : ಪಿಟೀಲು ವಾದಕ, ಸಂಗೀತಗಾರ, ಸಂಗೀತ ನಿರ್ದೇಶಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ವಾದ್ಯಗೋಷ್ಠಿಗಳಲ್ಲಿ ನುಡಿಸುವ ಕಲಾಭಿಜ್ಞ, ಕಲಾ ಕೌಶಲದ ವಿಧಾನಗಳಿಗೆ ಪ್ರಸಿದ್ಧರು. ಕರ್ನಾಟಕ ಸಂಗೀತ ಮತ್ತು ಪಾಶ್ಚಿಮಾತ್ಯ ಸಂಗೀತಗಳೆರಡರಲ್ಲೂ ತಮ್ಮದೇ ಆದ ಛಾಪು ಮುಡಿಸಿರುವ ಇವರು ಜಾಗತಿಕ ಸಂಗೀತ ವಲಯದಲ್ಲಿ ವೈಶಿಷ್ಯ ಪೂರ್ಣ ಸಂಯೋಜನೆಗಳನ್ನು ಮಾಡಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಸ.ಪ. ಶಾಲೆಯ ಮೂಲಕ ಹಲವಾರು ವಿದ್ಯಾರ್ಥಿಗಳನ್ನು ತಯಾರು ಮಾಡಿರುವ ಇವರು ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ಥಾಪಕರು.
ವಿ. ಲಕ್ಷ್ಮೀನಾರಾಯಣ – ಸೀತಾಲಕ್ಷ್ಮಿ ದಂಪತಿಯ ಮಗನಾಗಿ 1947ರ ಜುಲೈ 23ರಂದು ಜನಿಸಿದರು. ತಂದೆಯಿಂದಲೇ ಪಿಟೀಲು ಕಲಿತು ಆರನೇ ವಯಸ್ಸಿಗೇ ಕಛೇರಿ ನೀಡಿದ್ದರು. ಓದಿ ಎಂ.ಬಿ.ಬಿ.ಎಸ್. ಮಾಡಿದರೂ ಸಂಗೀತವನ್ನೇ ವೃತ್ತಿಯನ್ನಾಗಿ ಮಾಡಿಕೊಂಡು, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕ್ಯಾಲಿಫೋರ್ನಿಯಾ ಕಲಾ ಸಂಸ್ಥೆಯಿಂದ ಪದವಿ ಪಡೆದುಕೊಂಡರು. 200 ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಐತಿಹಾಸಿಕ ಅಲ್ಬಂಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಮೀರಾ ನಾಯರ್ ನಿರ್ದೇಶನದ ‘ಸಲಾಮ್ ಬಾಂಬೆ’ ಮತ್ತು ‘ಮಿಸಿಸಿಪ್ಪಿ ಮಸಾಲಾ’ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದರು. ಬರ್ನಾರ್ಡೊ ಬೆರ್ಟೊಲುಸ್ತಿಯ ‘ಲಿಟಲ್ ಬುದ್ಧ’, ಮರ್ಚೆಂಟ್-ಐವರಿ ಪ್ರೊಡಕ್ಷನ್ಸ್ ನ ‘ಕಾಟನ್ ಮೇರಿ’ ಚಲನಚಿತ್ರಗಳಲ್ಲಿ ಪಿಟೀಲು ವಾದಕರಾಗಿದ್ದರು. ಮದ್ರಾಸ್‌ನ ರಾಜ್ಯಪಾಲರಿಂದ ಪಿಟೀಲು ಸಾಮ್ರಾಟ ಬಿರುದು, ನಾರ್ವೆ ಬ್ರಾಡ್ ಕ್ಯಾಸ್ಟಿಂಗ್ ಕಾರ್ಪೊರೇಷನ್‌ನ ಎನ್‌ಆರ್‌ಕೆ ಪಿ2 ರೇಡಿಯೊ ಚಾನೆಲ್‌ನಿಂದ ಅತ್ಯುತ್ತಮ ರಚನಕಾರ ಪ್ರಶಸ್ತಿ, ನೇಪಾಳದ ದೊರೆ ಬೀರೇಂದ್ರ ಅವರಿಂದ ಗೌರವ ಪದಕ, 1988ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳನ್ನು ಪಡೆದಿರುವ ಎಲ್. ಸುಬ್ರಹ್ಮಣ್ಯಂ ಅವರು ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.