ಆಧುನಿಕತೆಯ ವೇಗದಡಿ ಬದಲುಗೊಳ್ಳುವ ನಾಗರೀಕತೆ, ವೈಜ್ಞಾನಿಕ ಚಿಂತನೆಯತ್ತ ಚಿತ್ತವರಿಸುತ್ತಿದಿಯೇ..? ಅಥವಾ ನಂಬಿಕೆಗಳ ಆಚರಣೆಗಳಲ್ಲಿ ಒಂದಿಷ್ಟು ಮೌಡ್ಯತೆ-ಕಂದಾಚಾರಗಳನ್ನು ತೊಳೆದು ಸುಧಾರಿಸುತ್ತಿದಿಯೇ..? ಅಥವಾ ಬದಲಾಗದ ಕಟ್ಟುಪಾಡುಗಳಲ್ಲಿ ಮೌಡ್ಯಗಳನ್ನು ಅನುಸರಿಸುವ ಬದುಕುಗಳು ಹಾಗೆಯೇ ಉಳಿದುಕೊಂಡಿದಿಯೇ..? ಎಂಬುದರ ಸಂಗತಿಗಳತ್ತ ಅಧ್ಯಯಿಸಿದಾಗ, ವಿಮರ್ಶಿಸಿದಾಗ ಈ ಮೇಲಿನ ಮೂರು ಸಂಗತಿಗಳು ಈ ಒಟ್ಟು ಸಮಾಜದಲ್ಲಿ ಇದ್ದೇ ಇದೆ, ಆದರೆ ಸಾಂವಿಧಾನಿಕ ಪ್ರಶ್ನೆಗಳು ಎಲ್ಲೆಲ್ಲಿ ದನಿಯಾಗಿದಿಯೋ.. ಅಲ್ಲಲ್ಲಿ ಇಂತಹ ಆಚರಣೆಗಳಲ್ಲಿನ ಮೌಡ್ಯ ಮತ್ತು ಕಂದಾಚಾರಗಳು ದೂರ ಸರಿದು ನಾಗರೀಕತೆಯ ಸಾಂಗತ್ಯ ಬಯಸಿದೆ ಎನ್ನುವುದು ಅಷ್ಟೆ ಸತ್ಯವಾಗಿದೆ. ಹೀಗಾಗಿ ಯಾವುದೇ ಆಚರಣೆಗಳಿಗೆ ವಿರೋಧವಿಲ್ಲ ಅದರೊಳಗಿನ ಮೌಡ್ಯತೆಗಳಿಗೆ ವಿರೋಧವಿದೆ ಎನ್ನುವ ಬಹುತೇಕ ಸಮಾಜಮುಖಿ ದನಿಗಳು ಪ್ರತಿಧ್ವನಿಸುತ್ತಲೇ ಇರುವ ಅಗತ್ಯತೆ ಇದೆ.
ಅಷ್ಟಕ್ಕೂ ಮೌಡ್ಯತೆ ಎನ್ನುವುದು ಹಿಂದೂ ಧಾರ್ಮಿಕತೆಯಲ್ಲಿ ಮಾತ್ರ ಇದೆ, ಅನ್ಯ ಧರ್ಮಗಳಲ್ಲಿ ಇಲ್ಲ ಎನ್ನುವುದು ತರ್ಕವಲ್ಲ, ಒಂದೆಡೆ ಮಾತ್ರ ಬೊಟ್ಟು ಮಾಡಿ ತೋರಿಸುವುದು ಕೂಡ ಸಮಂಜಸವಾದುದ್ದಲ್ಲ?, ಹೀಗೆ ಒಂದೆಡೆ ಮಾತ್ರ ತೋರು ಬೆರಳು ಬಿತ್ತುವುದಕ್ಕೆ ಶುರುವಾದರೆ ಅಲ್ಲಿನ ಕೃಷಿಯಲ್ಲಿ ಏಕತಾಭಿಪ್ರಾಯ ಬೆಳೆವುದು ಅಸಾಧ್ಯ. ಇಂತಹ ಟಿಪ್ಪಣಿಗಳ ನಡುವೆ ರಂಗ ಕಲಾವಿದೆ “ಲೀಕ್ ಔಟ್” ಕೃತಿಯ ಲೇಖಕಿ ಅಕ್ಷತಾ ಪಾಂಡವಪುರ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದ್ದು,
ರಂಗ ನಾಟಕದ ಅನೇಕತೆಗಳಲ್ಲಿ ವಿಭಿನ್ನ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ ಆದರೆ ತಾನು ಬರೆದ ಕೃತಿಗೆ ರಂಗ ಪ್ರಯೋಗವನ್ನು ಹೆಣೆದು ವಿಶಿಷ್ಠ ರೀತಿಯಲ್ಲಿ ಪ್ರಸ್ತುತ ಪಡಿಸುವುದಲ್ಲದೇ ಅದೇ ಸಂದರ್ಭದಲ್ಲಿ ಚಿತ್ತ ಸಮಾಜವನ್ನು ಜೋಡಿಸಿಕೊಳ್ಳುವುದು ಸಾಹಸವೇ ಹೌದಾಗಿದೆ, ಇಂತಹ ಪ್ರಯೋಗದಲ್ಲಿ ಅಕ್ಷತಾ ಪಾಂಡವಪುರ ಅವರು ಬಹುತೇಕ ಯಶಸ್ವಿಯಾಗಿದ್ದಾರೆ ಎಂದೆನಿಸುತ್ತದೆ.
ಈ ರಂಗ ಪ್ರಯೋಗಗಳಲ್ಲಿ ಏಕಪಾತ್ರಾಭಿನಯ ನೋಡಿದ್ದೇವೆ ನಿಜ ಆದರೆ ವೀಕ್ಷಕರನ್ನು ತಮ್ಮ ಪ್ರಯೋಗದಲ್ಲಿ ಸೆಳೆದುಕೊಂಡು ಅವರೊಳಗಿನ ಭಾವುಕತೆಯನ್ನು ತೆರೆದಿಡುವ ಪ್ರಯತ್ನವನ್ನು ಮಾಡುತ್ತಿರುವುದು ವಿಶೇಷ ಎನ್ನಬಹುದು, ಅಕ್ಷತಾ ಪಾಂಡವಪುರ ಅವರ ಭಾವದಲ್ಲಿ ಯಾವ ಸಿದ್ದಾಂತಗಳು, ಅಡಗಿದಿಯೋ ಎನ್ನುವ ತುಲನೆಗಿಂತಲೂ ಪುರುಷ ಪ್ರಧಾನ ಎನ್ನುವ ಈ ಕಾಲಘಟ್ಟದ ಹುಸಿ ಮಾತಿನಲ್ಲಿಯೂ ಹೆಣ್ಣೊಬ್ಬಳು ಆಚರಣೆಯ ನೆಪದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ, ಅವಳಿಗೂ ಸ್ವತಂತ್ರವಿದೆ, ಅಭಿವ್ಯಕ್ತಿಯಿದೆ, ಪುರುಷತ್ವದಲ್ಲಿ ಮಾತ್ರ ಕಾಮತ್ವದ ತೃಷೆಯ ಭಾವಗಳು, ಶೋಷಿತ ಭಾವುಗಳು ಬಲದಿ ಇವೆ, ಎನ್ನುವುದನ್ನು ತಮ್ಮದೇ ರೀತಿಯಲ್ಲಿ ಹೊರಗೆಳೆವುದರತ್ತ ತಲ್ಲೀನತೆ ಹೊಂದುವ ಅವರ ಈ ಪಾತ್ರದಲ್ಲಿ ಪುರುಷ ಪ್ರಧಾನ ಸಮಾಜ ಎಲ್ಲಿದೆ..? ಎನ್ನುವುದನ್ನು ಅವರೇ ಮನಗಾಣಬೇಕಿದೆ.
ಏಕೆಂದರೆ ಹೆಣ್ಣು ಪುರುಷನನ್ನು ಮೀರಿಸಿ ತಮ್ಮಲ್ಲಿನ ಕಲಾಕೌಶಲ್ಯದಿಂದ ಎಲ್ಲಾ ರಂಗದಲ್ಲಿಯೂ ಪ್ರಗತಿ ಸಾಧಿಸಿದ್ದಾಳೆ, ಮೇಲಾಗಿ ಅಕ್ಷತಾ ಪಾಂಡವಪುರ ಎನ್ನುವ ಮಹಿಳಾ ದನಿಯ ಅಭಿವ್ಯಕ್ತಿಗೆ ಎಲ್ಲೆಡೆ ಪೂರಕವಾದ ಬೆಂಬಲವೂ ವ್ಯಕ್ತವಾಗಿರುವುದು ಸಮಾಜದಲ್ಲಿ ಮುಕ್ತತೆ ಇದೆ ಎಂದು ಸಾಕ್ಷ್ಯಕರಿಸುತ್ತದೆ. ಆದರೆ ಅವರು ಆಚರಣೆಯೊಳಗಿನ ಮೌಡ್ಯಗಳನ್ನು ವಿರೋಧಿಸಬಹುದೇ ವಿನಃ ಆಚರಣೆಗಳೇ ತಪ್ಪು ಎಂದರೇ ಅಂತಹ ಅಭಿವ್ಯಕ್ತಿಗೆ ವ್ಯಾಪಕ ಪ್ರತಿರೋಧಗಳು ಎದುರಾಗುವುದರಲ್ಲಿ ಯಾವುದೇ ನಿಸ್ಸಂದೇಹವಿಲ್ಲವಾಗಿದೆ.
ಈ ಮಾತ್ರದಿ ಈ ಸಾಲುಗಳ ಶೀರ್ಷೀಕೆಯಲ್ಲಿ ಹೇಳಿದ್ದು ಲೀಕ್ ಔಟ್” ಎಂಬುವ ರಂಗ ಪ್ರಯೋಗ ಕಟ್ಟಿಕೊಂಡು ಯುದ್ಧಕ್ಕೆ ನಿಂತರೇ ಅಕ್ಷತಾ ಪಾಂಡವಪುರ…ಎಂದು..? ಏನೇ ಆಗಲಿ ಅವರ ನಿರರ್ಗಳತೆ, ಯಾವ ಸಂದೇಶವನ್ನು ಸಾರ್ವಜನಿಕಗೊಳಿಸಬೇಕು..? ತಮ್ಮ ವಿಭಿನ್ನ ಈ ರಂಗ ಪ್ರಯೋಗದ ಮೂಲಕ ವೀಕ್ಷಕರನ್ನು ಜೋಡಿಸಿಕೊಂಡು ಅವರಲ್ಲಿರುವ ಭಾವಗಳಿಗಿಂತಲೂ ತಾನು ಈಗಾಗಲೇ ನಿರ್ಧರಿಸಿರುವ ಭಾವಗಳನ್ನು ಅವರಲ್ಲಿ ನೀರಿಕ್ಷಿಸುವ ಯತ್ನ ಬಿಡಬೇಕಿದೆ, ಇನ್ನುಳಿದಂತೆ ಅವರ ಈ ರಂಗ ಪ್ರಯೋಗ ಯಾವ ಪಂಥೀಯ ವಾದಗಳನ್ನು ತಳೆಯದಿದ್ದರೆ ಇಡೀ ಭಾರತದಲ್ಲಿ ಮೊದಲ ಪ್ಯಯತ್ನವೆಂದು ಬಣ್ಣಿಸಲ್ಪಟ್ಟು ಜನಮಾನಸದಲ್ಲಿ ಶಾಶ್ವತೀಕರಿಸಬಹುದಾಗಿದೆ..
ಇಂತಿವ ಅಭಿಪ್ರಾಯಗಳನ್ನು ಇಲ್ಲಿ ಲಗತ್ತಿಸಿ, ಇದೆ ರಂಗ ಪ್ರಯೋಗಕ್ಕೆ ಶಿವಮೊಗ್ಗದ “ತಾಯಿಮನೆ” ಸ್ಥಳ ಗೊತ್ತು ಮಾಡಲಾಗಿದೆ, ಜೀವಪರ ನಿಲುವಳ್ಳ ವಕೀಲರಾದ ಶ್ರೀಪಾಲ್ ರವರು ಎಂದಿನ ಹಾಗೇ ರಂಗಕರ್ಮಿಗಳನ್ನು ಉತ್ತೇಜಿಸುವಂತೆ ಇವರಿಗೂ ಇಲ್ಲಿ ಆಹ್ವಾನಿಸಿದ್ದಾರೆ ಎನ್ನುವ ಸಂಗತಿ ತಿಳಿದ ಮೇಲೆ ನಮ್ಮ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಸದಸ್ಯರೆಲ್ಲರೂ ಅಲ್ಲಿಗೆ ಜಮಾಯಿಸಿದ್ವಿ, ಈ ಮೊದಲು ನಾವುಗಳೇ ತಮಾಷೆಗೆ ಮಾತಾಡಿಕೊಂಡಂತೆ ಎನ್ ” ಲೀಕ್ ಔಟ್”…? ಎಂಬುದಕ್ಕೆ ಅಲ್ಲಿ ಬೇರೆಯ ಅರ್ಥ ಸಹಜವಾಗಿ ಬಂತು,
ಆದರೆ ಕೃತಿಯ ಲೇಖಕಿ ಅಕ್ಷತಾ ಪಾಂಡವಪುರ ಅವರ ರಂಗ ಪ್ರಯಾಣದಲ್ಲಿ ಹೊತ್ತು ಕಳೆದಿದ್ದು ಗೊತ್ತೇ ಆಗಲಿಲ್ಲ, ಸರಿ ಸುಮಾರು 7.00 ಘಂಟೆಗೆ ಶುರುವಾದ ʼಲೀಕ್ ಔಟ್” ಕೃತಿಯಲ್ಲಿನ ಒಂದು ಕತೆಯ ಕಥಾನಾಯಕಿ ಮಂಜುಳ ಎನ್ನುವ ಪಾತ್ರ ನಿಜಕ್ಕೂ ಒಳಗಣ್ಣು ತೆರೆದಿಡಿಸುತ್ತದೆ, ಅವರ ಪಾತ್ರ, ಹಾಗೂ ವೀಕ್ಷಕರಿಗೆ ಕೆಲ ಪ್ರಾಪರ್ಟಿಗಳನ್ನು ಕೊಟ್ಟು ಆ ಮೂಲಕ ಅವರೊಳಗಿನ ಭಾವಗಳನ್ನು ಲೀಕ್ ಔಟ್ ಮಾಡುವ ಪ್ರಯತ್ನ ಒಂದು ರೀತಿಯಲ್ಲಿ ಅಧ್ಯಯನ ಶೀಲತೆಗೆ ಕೊಂಡೊಯ್ಯುವಂತೆ ಮಾಡುತ್ತಿರುವಾಗಲೇ ಈ ರಂಗ ಪ್ರಯೋಗ ಮುಗಿದಿದೆ ಎಂದಾಗ ಸಮಯ 9.00 ಗಂಟೆಯ ಆಸು ಪಾಸಿನಲ್ಲಿತ್ತು,
ಡ್ರಾಮ ಮುಗಿದು ಮನೆ ಕಡೆ ಹೊರಟಾಗ ಅಕ್ಷತಾ ಪಾಂಡವಪುರ ಅವರ ಚಿಂತನೆಗಳೇನೆ ಇರಲಿ, ಅವರ ಕತೆಯಲ್ಲಿನ ಕಥಾನಾಯಕಿ ಮಂಜುಳ ಪಾತ್ರ, ಪ್ರತಿ ಸೂರಿನ ಜಗಲಿಗಳಲ್ಲಿದ್ದೇ ಇದೆ ಎನ್ನುವುದು ಖಾತ್ರಿ ಪಡಿಸಿತ್ತು, ಇನ್ನೂ ಮೌಡ್ಯ-ಕಂದಾಚಾರಗಳಿಂದ ಸಮಾಜ ಸುಧಾರಣೆಯತ್ತ ಬಂದ ನಂತರ ಒಂದಿಷ್ಟು ಬದಲಾಗಿದೆ ಎನ್ನಬಹುದೇ ವಿನಃ ಆಚರಣೆಯ ನೆವದಲ್ಲಿನ ಮೌಡ್ಯ -ಕಂದಾಚಾರಗಳು ಇನ್ನೂ ಹಲವಡೆ ಜೀವಂತವಾಗಿದೆ ಎನ್ನುವುದನ್ನು ದೂರ ತಳ್ಳುವಂತಿಲ್ಲ, ಈ ನಿಟ್ಟಿನಲ್ಲಿ ಅಕ್ಷತಾ ಪಾಂಡವಪುರ ಅವರ ಲಿಂಗ ತಾರತಮ್ಯವಿಲ್ಲದ ಅಭಿವ್ಯಕ್ತಿ ಪ್ರಬುದ್ದ ಸಮಾಜದ ಕೊಂಡಿಯಾಗಲಿ ಎಂದು ಅವರಿಗೆ ಅಭಿನಂದಿಸುವೆ. ಅಲ್ಲದೆ ನಾಳೆ ಶುಕ್ರವಾರ ಬಿಡುಗಡೆಯಾಗಲಿರುವ ಅವರೇ ಅಭಿನಯಿಸಿರುವ “ಪಿಂಕಿ ಎಲ್ಲಿ..?” ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡಿ ಚಿತ್ರದಲ್ಲಿನ ತಾರಾಬಳಗದ ಪ್ರಯತ್ನಕ್ಕೆ ಶುಭ ಹಾರೈಸೋಣ ನಮಸ್ತೆ.
-ಗಾ. ರಾ. ಶ್ರೀನಿವಾಸ್