ಮಂಗಳೂರು : ಉಮ್ಮಕ್ಕೆ ಚಾರಿಟೇಬಲ್ ಟ್ರಸ್ಟ್ ಮತ್ತು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಆಶ್ರಯದಲ್ಲಿ ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ದಿನಾಂಕ 17 ಆಗಸ್ಟ್ 2025ರಂದು ಆಯೋಜಿಸಿದ್ದ ಉಮ್ಮಕ್ಕೆನ ನೆಂಪು, ದತ್ತಿನಿಧಿ ಉಪನ್ಯಾಸ, ಕೂಡುಕಟ್ಟ್ ದ ಪಾತೆರಕತೆ, ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ “ಸ್ವಹಿತವನ್ನು ಬಯಸದೆ ಪರರ ಹಿತಕ್ಕಾಗಿ ಸ್ಪಂದಿಸಿದ ಉಮ್ಮಕ್ಕೆಯವರ ಆದರ್ಶಗಳು ನಮಗೆ ಸ್ಫೂರ್ತಿಯಾಗಬೇಕು. ಹಿರಿಯರಾದ ವಾಸುದೇವ ಉಚ್ಚಿಲರು ದಕ್ಷಿಣ ಕನ್ನಡದ ಸಾಮಾಜಿಕ ಹೋರಾಟಗಳ ಮೂಲಕ ಪ್ರೇರಣೆ ನೀಡಿದವರು” ಎಂದು ನುಡಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ “ಕೌಟುಂಬಿಕ ಸಂಬಂಧಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ಹಿರಿಯರ ನೆನಪುಗಳನ್ನು ವಿಶಿಷ್ಟ ಮಾದರಿಯಲ್ಲಿ ಮಾಡುತ್ತಿರುವುದು ಶ್ಲಾಘನೀಯ” ಎಂದರು.
ಸಂತ ಕವಿ ಕನಕದಾಸ ಪ್ರಶಸ್ತಿಯನ್ನು ಜನಪರ ಹೋರಾಟಗಾರ ವಾಸುದೇವ ಉಚ್ಚಿಲರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ರೂ.30,000/- ಮತ್ತು ಸ್ಮರಣೆಕೆಗಳನ್ನು ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಸುದೇವ ಉಚ್ಚಿಲ ಇವರು ಪ್ರಗತಿಪರ ಹಾಗೂ ಜನಪರ ಚಿಂತನೆಯ ಅನುಷ್ಠಾನದ ಕರ್ತವ್ಯ ನಿರ್ವಹಿಸಿದ ತನ್ನನ್ನು ಗುರುತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಮಾತೃ ಮೂಲಿಯ ಕುಟುಂಬ ವ್ಯವಸ್ಥೆಯ ಸಾಧ್ಯತೆಗಳ ಕುರಿತು ಲೇಖಕಿ ಡಾ. ಜ್ಯೋತಿ ಚೇಳ್ಯಾರು ದತ್ತಿ ಉಪನ್ಯಾಸ ನೀಡಿದರು.
ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಗಳಿಸಿದ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಫಾತಿಮಾತ್ ರಿಫಾನ, ಮಾನಿಲ ಸರ್ಕಾರಿ ಪ್ರೌಢ ಶಾಲೆಯ ಶೈನಾ ಲೀಸಾ ಮೊಂತೆರೊ ಮತ್ತು ಮಂಗಳೂರಿನ ಕಾಸ್ಸಿಯಾ ಪ್ರೌಢ ಶಾಲೆಯ ಪ್ರಜ್ಞಾ ಇವರನ್ನು ರೂ.10,000/- ನಗದು ಪುರಸ್ಕಾರದೊಂದಿಗೆ ಸಮ್ಮಾನಿಸಲಾಯಿತು. ಪ್ರೊ. ರಾಜರಾಮ ತೋಲ್ಪಡಿ ಇವರು ಉಮ್ಮಕ್ಕೆ ನೆಂಪು ನಡೆಸಿ ಉಮ್ಮಕ್ಕೆ ಮಾದರಿಯೊಂದು ನಮ್ಮೆದುರಿಗೆ ಇದ್ದು ಅದನ್ನು ಅನುಸರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಮತ್ತು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ “ಕುಟುಂಬದ ಹಿರಿಯರಾಗಿ ಎಲ್ಲಾ ವರ್ಗದ ಜನರಿಗೆ ಪ್ರೀತಿ ಹಂಚಿದ ಉಮ್ಮಕ್ಕೆ ಮಾನವೀಯ ಸಂಬಂಧಗಳ ರೂಪಕವಾಗಿದ್ದಾರೆ” ಎಂದರು.
ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿ, ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಾರ್ಯದರ್ಶಿ ಯಶೋದಾ ಮೋಹನ್ ವಂದಿಸಿ, ಸುನೀಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಜೆ. ಬೈಕಾಡಿ ಆಶಯ ಗೀತೆ ಹಾಡಿದರು. ಕಿನ್ನಿಗೋಳಿ ಸ್ವರಾಂಜಲಿಯ ಕುಮಾರಿ ಆಶ್ವೀಜಾ ಉಡುಪ ಇವರಿಂದ ಪದರಂಗಿತ ಗಾಯನ ಪ್ರಸ್ತುತಗೊಂಡಿತು.