ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ‘ಸಾಂಪ್ರದಾಯಿಕ ನೇಯ್ಗೆಯ ಪುನರುಜ್ಜೀವನ : ಉಡುಪಿ ಸೀರೆ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆಯ ಸಪ್ತಾಹ ಆಚರಣೆಯ ಆರನೇ ಕಾರ್ಯಕ್ರಮದಲ್ಲಿ ಆಯೋಜಿಸಿತು.
ಮುಖ್ಯ ಭಾಷಣಕಾರರಾದ ಕದಿಕೆ ಟ್ರಸ್ಟಿನ ಸಂಸ್ಥಾಪಕಿ ಮಮತಾ ರೈಯವರು ಉಡುಪಿ ಸೀರೆಯನ್ನು ಪುನರುಜ್ಜೀವನಗೊಳಿಸುವ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಹಂಚಿಕೊಂಡರು. ಕದಿಕೆ ಟ್ರಸ್ಟ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನೇಕಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಈ ಪಾರಂಪರಿಕ ಕರಕುಶಲತೆಯನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಮಮತಾ ರೈ ತಮ್ಮ ಭಾಷಣದಲ್ಲಿ ವಿಜ್ಞಾನ ಪ್ರಾಧ್ಯಾಪಕ ಜೀವನದಿಂದ ಉಡುಪಿ ಸೀರೆಯ ಪ್ರೋತ್ಸಾಹಕರಾದ ಪಯಣವನ್ನು ವಿವರಿಸಿದರು. “ನಾನು ಈ ಯೋಜನೆಯನ್ನು ಪ್ರಾರಂಭಿಸಿದಾಗ, ಕೇವಲ 40-45 ನೇಕಾರರು ಮಾತ್ರ ಉಳಿದಿದ್ದರು, ಅವರು ಬಹುತೇಕ ಮೂರು ದಶಕಗಳ ಹಿಂದೆಯೇ ಈ ಕಲೆಗಳನ್ನು ತೊರೆದಿದ್ದರು. ಯುವ ಪೀಳಿಗೆ ನೇಕಾರಿಕೆಯಲ್ಲಿ ಭವಿಷ್ಯವಿಲ್ಲ ಎಂದು ಭಾವಿಸುತ್ತಿತ್ತು” ಎಂದು ನೆನಪಿಸಿದರು.
ಉಡುಪಿ ಸೀರೆಯ ಪುನರುಜ್ಜೀವನಕ್ಕೆ ಕದಿಕೆ ಟ್ರಸ್ಟ್ ಕೈಗೊಂಡ ಸಮಗ್ರ ಪ್ರಕ್ರಿಯೆಯನ್ನು ವಿವರಿಸಿದರು. ಇದರಲ್ಲಿ ವ್ಯಾಪಕವಾದ ಸಂಶೋಧನೆ, ನೇಯ್ಗೆ ಸಮುದಾಯಗಳಲ್ಲಿ ನಂಬಿಕೆ-ನಿರ್ಮಾಣ, ತರಬೇತಿ ಕಾರ್ಯಕ್ರಮಗಳು, ಬ್ರ್ಯಾಂನಡಿಂಗ್ ಮತ್ತು ಜಾಗೃತಿ ಅಭಿಯಾನಗಳು ಸೇರಿವೆ ಎಂದು ತಿಳಿಸಿದರು. ಈ ಪ್ರಯತ್ನಗಳು ಗಮನಾರ್ಹವಾದ ರೂಪಾಂತರಕ್ಕೆ ಕಾರಣವಾಗಿವೆ, ನೇಯ್ಗೆ ಸಂಪ್ರದಾಯವು ಈಗ ಬೆಳೆಯುತ್ತಿರುವ ಮಾರುಕಟ್ಟೆ, ಭೌಗೋಳಿಕ ಭಿನ್ನತೆ ಅಂಕಿತ (GI Tag) ಮೂಲಕ ಗುರುತಿಸುವಿಕೆ ಮತ್ತು ನೇಕಾರರಿಗೆ ಖಚಿತವಾದ ಸ್ಥಿರ ಆದಾಯವನ್ನು ಹೊಂದಿದೆ. ಯುವ ಪೀಳಿಗೆಯು ಕರಕುಶಲತೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದೆ. “ಇಂದು, ಉಡುಪಿ ಸೀರೆಗಳು ತಮ್ಮ ಸರಿಯಾದ ಸ್ಥಾನವನ್ನು ಸ್ಥಿರವಾಗಿ ಮರಳಿ ಪಡೆಯುತ್ತಿವೆ” ಎಂದು ಹೇಳಿದರು.
ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿಸಿ, ಶರ್ವಾಣಿ ಭಟ್ ಉಪನ್ಯಾಸಕರನ್ನು ಪರಿಚಯಿಸಿದರು. ಪರಂಪರೆಯ ಸಂರಕ್ಷಣೆಗೆ ನೀಡಿದ ಕೊಡುಗೆಗಳಿಗಾಗಿ ಮಮತಾ ರೈಯವನ್ನು ಸನ್ಮಾನಿಸಲಾಯಿತು.