ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ಸರಣಿ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 16 ನವೆಂಬರ್ 2024ರ ಶನಿವಾರದಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಬೃಹದಾರಣ್ಯಕ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಲು ಆಗಮಿಸಿದ ಸಂಸ್ಕೃತ ವಿದ್ವಾಂಸರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ವಿದ್ಯಾವಾರಿಧಿ ಡಾ. ವಾಗೀಶ್ವರೀ ಶಿವರಾಮ್ ಮಾತನಾಡಿ “ನಾಮರೂಪಗಳ ಆಚೆಗಿರುವ ಪರಮಾತ್ಮನ ಶಕ್ತಿಯ ಪರಿಚಯವನ್ನು ಮಾಡಿಸಿ ಅಂತಹ ಪರಮಾತ್ಮನೆಡೆಗೆ ಸಾಗಲು ನೆರವಾಗುವ ಇಂದ್ರಿಯಗಳ ನಿಗ್ರಹ, ಪರಿಶ್ರಮದ ಸಾಧನೆಯ ವಿವರಗಳನ್ನು ಶಿಷ್ಯರಿಗೆ ಬೋಧಿಸಿದ ಜ್ಞಾನವೇ ‘ಬೃಹದಾರಣ್ಯಕ ಉಪನಿಷತ್ತು’ ಆಗಿದೆ. ನಮ್ಮ ವಿವೇಕದ ಪ್ರಜ್ಞೆಯನ್ನು ಜಾಗೃತಗೊಳಿಸಿ ಪಂಚೇಂದ್ರಿಯಗಳಿಗೆ ನಿಲುಕುವ ಭೌತಿಕ ಜ್ಞಾನವನ್ನು ಮೀರಿದ ಇಂದ್ರಿಯಾತೀತ ಜ್ಞಾನವನ್ನು ನೀಡುವ ಉಪನಿಷತ್ತುಗಳು ಜ್ಞಾನದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ನಮ್ಮನ್ನು ದುರ್ಬಲಗೊಳಿಸುವ ಅಹಂಕಾರ, ಮಮಕಾರ, ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಲೋಕಹಿತದ ಕಾರ್ಯದಲ್ಲಿಯೇ ಆನಂದವನ್ನು ಕಂಡುಕೊಳ್ಳುವ ಬಗ್ಗೆ ಉಪನಿಷತ್ತು ನಮಗೆ ಮಾರ್ಗದರ್ಶನ ನೀಡುತ್ತದೆ.” ಎಂದರು.
ಡಾ. ನಾ. ಮೊಗಸಾಲೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ನಿತ್ಯಾನಂದ ಪೈ ಮತ್ತು ಶ್ರೀಮತಿ ಮಿತ್ರಪಭಾ ಹೆಗ್ಡೆ ಅತಿಥಿಯಾಗಿ ಭಾಗವಹಿಸಿದರು. ಶ್ರೀಮತಿ ಗೀತಾ ಮಲ್ಯ ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಶ್ರೀಮತಿ ಪೂರ್ಣಿಮಾ ಶೆಣೈ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಗೋಖಲೆ ವಂದಿಸಿದರು.