ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿ.ವಿ.ಯ ಹಳೆಸೆನೆಟ್ ಸಭಾಂಗಣದಲ್ಲಿ ‘ಮಹಾಭಾರತದಲ್ಲಿ ದಾರ್ಶನಿಕತೆ’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 17-01-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ “ಶಾಂತಿ ನಿಜವಾಗಿ ಯಾರಿಗೂ ಬೇಡ. ಎಲ್ಲರಿಗೂ ಅವರವರ ಧ್ವಜ ಹಾರಬೇಕು ಅಷ್ಟೇ. ಇದು ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳ ಸ್ಥಿತಿಗತಿ. ಎಲ್ಲ ಜಾತಿ ಧರ್ಮಗಳಲ್ಲೂ ಇಂದು ಕ್ಷತ್ರಿಯರೇ ಹೆಚ್ಚಾಗಿದ್ದಾರೆ. ಅವರಿಗೆ ಮಹಾಭಾರತದ ಕೊನೆಯಲ್ಲಿ ಬರುವ ಧರ್ಮರಾಯನ ಪಶ್ಚಾತ್ತಾಪದ ಅರಿವು ಒದಗಬೇಕಿದೆ. ದೇವರಿಗೆ ನಟಿಸಲಾಗುವುದಿಲ್ಲ. ಮನುಷ್ಯನಿಗೆ ನಟಿಸದೇ ಇರಲಾಗುವುದಿಲ್ಲ. ನಟನೆ ತರುವ ಸಂಕಟ ವಿಷಾದಕ್ಕೆ ದಾರಿ ಮಾಡುತ್ತದೆ. ನರನಿಗೆ ವಿಷಾದ ಉಂಟಾಗದೇ ದೇವರ ಪ್ರಸಾದವಿಲ್ಲ. ಸಂಸ್ಕೃತಿಗೆ ಬಾಲ್ಯವನ್ನು ವಿಸ್ತಾರಗೊಳಿಸುವ ಹಂಬಲ ನಾಗರಿಕತೆಗೆ ಬಾಲ್ಯವನ್ನು ನಾಶ ಮಾಡುವ ಧಾವಂತ. ಕವಿ ಯಾವ ಪೂರ್ವಾಗ್ರಹವೂ ಇಲ್ಲದೇ ಯಾವ ಪಾತ್ರವನ್ನು ಹೊಸಕಿ ಹಾಕದೇ ಮಾನವೀಯ ಅನುಸಂಧಾನವನ್ನು ಸಾಧ್ಯವಾಗಿಸುತ್ತಾನೆ.” ಎಂದು ಹೇಳಿದರು.
ಲಕ್ಷ್ಮೀಶ ತೋಳ್ಪಾಡಿಯವರ ‘ಮಹಾಭಾರತ ಅನುಸಂಧಾನ ಭಾರತಯಾತ್ರೆ’ ಕೃತಿಯ ಪರಿಚಯ ಮಾಡಿದ ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಮಾತನಾಡಿ “ಇದು ಮಹಾಭಾರತ ನಮಗೆ ಯಾಕೆ ಮಹತ್ವವಾಗುತ್ತದೆ ಎಂಬುವುದನ್ನು ಶೋಧಿಸುವ ಮಹತ್ವದ ಕೃತಿ. ಧರ್ಮರಾಯನ ಮೂಲಕ ಮಹಾಭಾರತವನ್ನು ನೋಡುವ ಇದು ಅರಿವನ್ನು ವಿಸ್ತರಿಸುವ ಕೃತಿಯಾಗಿದೆ. ಮಾತ್ರವಲ್ಲದೆ ಅವರು ಮಹಾಭಾರತದ ವಸ್ತು, ಪಾತ್ರ, ವಿಷಯ ಮತ್ತು ಘಟನೆಗಳನ್ನು ಅನುಭವಿಸಿ ಬರೆದ ಕೃತಿ. ಇದು ಮಾನವೀಯತೆ, ಮುಗ್ದತೆ, ತಾಯ್ತನ ಮೊದಲಾದವುಗಳ ಮೌಲ್ಯಗಳನ್ನು ತಿಳಿಸುತ್ತದೆ. ಮಹಾಭಾರತ ಹಾಗೂ ಅದರೊಳಗಿರುವ ಜೀವ ಚೈತನ್ಯಗಳನ್ನು ಗುರುತಿಸಿ ಸಮಾಜಕ್ಕೆ ಕೃತಿಯ ಮೂಲಕ ನೀಡಿದ್ದಾರೆ. ಅವರ ಈ ಕೃತಿಗೆ ಅರ್ಹವಾಗಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.” ಎಂದರು.
ಮಂಗಳೂರು ವಿ.ವಿ. ಕುಲಪತಿಗಳಾದ ಪ್ರೊ. ಜಯರಾಜ್ ಅಮೀನ್ ಅವರು ಅಧ್ಯಕ್ಷತೆಯನ್ನು ನಿರ್ವಹಿಸಿ ಮಾತನಾಡಿ “ತೋಳ್ಪಾಡಿ ಅವರು ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ ಮತ್ತು ಚಿಂತಕ. ಅವರ ಬರವಣಿಗೆಯಲ್ಲಿ ಆಧ್ಯಾತ್ಮಿಕತೆ ಮತ್ತು ಲೌಕಿಕತೆ ಎರಡನ್ನೂ ಕಾಣಲು ಸಾಧ್ಯವಿದೆ. ಯುವ ಸಾಹಿತ್ಯಾಸಕ್ತರಿಗೆ ಇವರ ಕೃತಿ ಹಾಗೂ ಬರವಣಿಗೆಗಳು ಪ್ರೇರಕ ಶಕ್ತಿಯಾಗಿದೆ.“ ಎಂದರು.
ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ಸೋಮಣ್ಣ ಹೊಂಗಳ್ಳಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷರಾದ ಎಂ.ಪಿ.ಶ್ರೀನಾಥ್ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಪ್ರೊ. ಮಂಜುನಾಥ ಪಟ್ಟಾಭಿ, ಪ್ರೊ. ಪಿ.ಎಲ್ ಧರ್ಮ, ಡಾ. ನಾಗಪ್ಪ ಗೌಡ, ಪತ್ರಿಕೋದ್ಯಮ ಉಪನ್ಯಾಸಕ ಮಂಜಪ್ಪ ಗೋಣಿ, ಉಳ್ಳಾಲ ಕಸಾಪ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಲ| ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಆನಂದ ಅಸೈಗೋಳಿ, ಡಾ.ಯೋಗೀಶ್ ಕೈರೋಡಿ, ಟಿ.ಎ.ಎನ್ ಖಂಡಿಗೆ ಮತ್ತಿತರರು ಭಾಗವಹಿಸಿದ್ದರು. ಕಸಾಪ ಉಳ್ಳಾಲ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.